ಬೆಂಗಳೂರು:ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಆದರೆ, ಚುನಾವಣಾ ಪ್ರಕ್ರಿಯೆ ಬಗ್ಗೆ ಆಯೋಗಕ್ಕೆ ಸ್ಪಷ್ಟತೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ?. ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು? ಎಂದು ಪ್ರಶ್ನಿಸಿರುವ ಹೆಚ್ಡಿಕೆ ಇಂತಹ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ ಎಂದಿದ್ದಾರೆ.
ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.