ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅವರೇ ಒರಿಜಿನಲ್ ಅಂತಾ ಬೋರ್ಡ್ ಹಾಕ್ಕೋಳ್ರಪ್ಪ, ಅವರೇ ಒರಿಜಿನಲ್ ಅಂತಾ ಬರ್ಕೊಳ್ಳಿ ಎಂದರು.
ನಗರದಲ್ಲಿ ಸೋಮವಾರ ನಡೆದ 'ಜೆಡಿಎಸ್ ಚಿಂತನ ಮಂಥನ' ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದಿದ್ದರು. ಈ ವಿಚಾರವಾಗಿ ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ನಿಮಗೆ ಅದು ದೊಡ್ಡದಾಗಿ ಕಾಣಿಸುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿ, ನಿಖಿಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಹ ಸಿಲ್ಲಿ ವಿಚಾರಕ್ಕೆ ಬರಬೇಡಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನೀವು (ಮಾಧ್ಯಮದವರು) ಯಾಕೆ ವರಿ ಮಾಡಿಕೊಳ್ಳುತ್ತೀರಿ ಎಂದು ಸಿಡಿಮಿಡಿಗೊಂಡರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರತಿಕ್ರಿಯೆ ಪಡೆಯಲು ಹೋದಾಗ, ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮೂರ್ನಾಲ್ಕು ದಿನ ಕಳೆಯಲಿ, ಪಕ್ಷದ ಕಚೇರಿಗೆ ಬಂದು ಎಲ್ಲ ವಿಷಯವನ್ನೂ ಅಲ್ಲೇ ಮಾತನಾಡುತ್ತೇನೆ ಎಂದು ತಿಳಿಸಿದರು.
ಸಿ.ಎಂ.ಇಬ್ರಾಹಿಂ ಹೇಳಿಕೆ:ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಿ.ಎಂ.ಇಬ್ರಾಹಿಂ, ಮೈತ್ರಿ ವಿರೋಧಿಸುತ್ತಿರುವ ಅಸಮಾಧಾನಿತ ನಾಯಕರ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ಸಭೆ ನಡೆಸಿ ತೀರ್ಮಾನ ಮಾಡಬೇಕು. ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನಾಯಕರೂ ನನ್ನೊಂದಿಗೆ ಮಾತನಾಡಿದ್ದಾರೆ. ಈ ಸಭೆಯ ಚರ್ಚೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ತಿಳಿಸುತ್ತೇನೆ.
ಹೊಸ ಕೋರ್ ಕಮಿಟಿ ರಚನೆ ಮಾಡುತ್ತೇನೆ. ಅದರ ಸಭೆ ಕರೆಯುತ್ತೇನೆ. ಅಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಜಿಲ್ಲಾ ಪ್ರವಾಸ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಎನ್ಡಿಎ ಜತೆ ಜೆಡಿಎಸ್ ಸೇರಲು ಬಿಡುವುದಿಲ್ಲ. ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದು 'ದಳಪತಿ'ಗಳಿಗೆ ಖಡಕ್ ಸಂದೇಶ ರವಾನಿಸಿದ್ದರು.
ಇದನ್ನೂ ಓದಿ:ಸಿ.ಎಂ.ಇಬ್ರಾಹಿಂ ನೇತೃತ್ವದ 'ಚಿಂತನ ಮಂಥನ' ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಫೋಟೋ ನಾಪತ್ತೆ!