ಬೆಂಗಳೂರು:ಸರ್ಕಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ನಾನ್ಯಾರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉತ್ತರ ಕರ್ನಾಟಕಕ್ಕೆ ಹೋಗಿದ್ದನ್ನು ನಿನ್ನೆ ರಾತ್ರಿಯೇ ನೋಡಿದ್ದೇನೆ. ವರುಣನ ಆರ್ಭಟ ಹೆಚ್ಚಾಗಿದೆ. ಯಾರೇ ಹೋದರೂ ಪ್ರವಾಹ ನಿಲ್ಲಿಸೋಕಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ನಾನ್ಯಾರು. ಸ್ಥಳಕ್ಕೆ ಹೋದರೆ ಅಲ್ಲಿನ ಜನರೇ ಹೇಳುತ್ತಾರೆ. ಪ್ರವಾಹವನ್ನು ಒಂದೇ ದಿನಕ್ಕೆ ನಿಲ್ಲಿಸಲು ಆಗುವುದಿಲ್ಲ. ಆದರೆ ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಿಎಂ ಮತ್ತು ರೈಲ್ವೆ ಮಂತ್ರಿಗಳು ಹೋಗಿರುವುದನ್ನು ಟಿವಿಯಲ್ಲಿ ನೋಡಿದ್ದೇನೆ. ಅವರಿನ್ನೂ ಮಂತ್ರಿ ಮಂಡಲ ರಚಿಸಿಲ್ಲ. ಅವರ ಹೈಕಮಾಂಡ್ ಆದೇಶ ನೀಡಿದ ನಂತರ ಮಾಡಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇತ್ತ ಬಿಜೆಪಿ ವಿರುದ್ಧ ಜೆಡಿಎಸ್ ಟ್ವಿಟರ್ನಲ್ಲಿ ಕಿಡಿಕಾರಿದೆ. ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಲಿಲ್ಲ. ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಪರಿಹಾರ ಕೇಂದ್ರವನ್ನೂ ಸ್ಥಾಪಿಸಿಲ್ಲ ಎಂದು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.