ಕರ್ನಾಟಕ

karnataka

ETV Bharat / state

ಮರಣ ಪ್ರಮಾಣ ಪತ್ರಕ್ಕೆ ಇ -ಕೆವೈಸಿ ಅನುಸರಿಸಲು ಹೈಕೋರ್ಟ್ ಸೂಚನೆ - ಡೆತ್ ಸರ್ಟಿಫಿಕೇಟ್‌

ಮರಣ ಪ್ರಮಾಣ ಪತ್ರ ವಿತರಣೆಗೆ ಮುನ್ನ ಇ ಕೆವೈಸಿ ಅನುಸರಿಸುವಂತೆ ಹೈಕೋರ್ಟ್​ ಸೂಚನೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Nov 24, 2023, 10:30 PM IST

ಬೆಂಗಳೂರು:ಮರಣ ಪ್ರಮಾಣಪತ್ರ ವಿತರಣೆಗೆ ಮುನ್ನ ಇ-ಕೆವೈಸಿ ಮಾದರಿ ದತ್ತಾಂಶ ಸಂಗ್ರಹ ಅನುಸರಿಸುವಂತೆ ಹೈಕೋರ್ಟ್, ಬಿಬಿಎಂಪಿ ಮತ್ತು ಇ-ಆಡಳಿತ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಬೆಂಗಳೂರಿನ ಸಾಯಿಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಈ ಪ್ರಕ್ರಿಯೆ ಪ್ರಾರಂಭಿಸಿರುವುದರಿಂದ ಮರಣ ಪ್ರಮಾಣಪತ್ರ ವಿತರಣೆಯಲ್ಲಿ ದೋಷಗಳು ಆಗುವುದು ತಪ್ಪಿಸಬಹುದಾಗಿದೆ. ಮೊದಲು ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟ ಕೂಡಲೇ ಅವರ ವಿವರಗಳನ್ನು ಇ-ಕೆವೈಸಿಯಲ್ಲಿ ಭರ್ತಿ ಮಾಡಬೇಕು. ನಂತರ ಅದನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಮರಣ ಪ್ರಮಾಣಪತ್ರ ವಿತರಿಸಬೇಕು ಎಂದು ಸೂಚನೆ ನೀಡಿದೆ.

ಯಾವುದೇ ವ್ಯಕ್ತಿಯ ಸಾವು ಸಂಭವಿಸಿದ ಕೂಡಲೇ ಆಸ್ಪತ್ರೆಯ ದಾಖಲೆಗಳಲ್ಲಿ ಅದನ್ನು ನಮೂದಿಸಬೇಕು ಮತ್ತು ಆನಂತರ ಮರಣ ಪ್ರಮಾಣಪತ್ರ ವಿತರಿಸಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಿವೆ ಮತ್ತು ಇದು ದುರ್ಬಳಕೆ ಸಾಧ್ಯತೆಗಳೂ ಸಹ ಹೆಚ್ಚಿರಲಿವೆ.

ಹೀಗಾಗಿ ಆಸ್ಪತ್ರೆಗಳು ಯಾರು ಮೃತಪಟ್ಟಿದ್ದಾರೆ ಎಂಬುದನ್ನು ಗುರುತಿಸಿ, ಮೃತ ವ್ಯಕ್ತಿಯ ಅಗತ್ಯ ದಾಖಲೆಗಳನ್ನು ಪಡೆದು ಆ ವಿವರಗಳನ್ನು ಪ್ರಾಥಮಿಕ ಹಂತದಲ್ಲಿಯೇ ದಾಖಲಿಸಬೇಕು. ಅದನ್ನು ಸಂಬಂಧಿಸಿದ ಪ್ರಾಧಿಕಾರ ಅಥವಾ ಅಧಿಕಾರಿಗಳು ಪರಿಶೀಲಿಸಿ ಆನಂತರ ಮರಣ ಪ್ರಮಾಣಪತ್ರ ವಿತರಿಸಬೇಕು. ಇದರಿಂದ ಬಹುತೇಕ ತಪ್ಪುಗಳಾಗುವುದನ್ನು ತಡೆಯಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಜನನ ಮತ್ತು ಮರಣ ಪ್ರಮಾಣಪತ್ರಗಳಿಗೆ ಅದರದ್ದೇ ಆದ ಮಾನ್ಯತೆ ಇದ್ದು, ಅದನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ ಹಾಗೂ ಅದನ್ನು ಆಧಾರ್‌ನಲ್ಲಿ ಬಳಸುವಂತೆ ಇ - ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆೆ ಜಾರಿಗೊಳಿಸಬೇಕು ಎಂದು ಹೇಳಿದೆ.

ಅಲ್ಲದೆ, ಕರ್ನಾಟಕ ಜನನ ಮತ್ತು ಮರಣ ನೋಂದಣಿ ನಿಯಮ 1999ರ ನಿಯಮ 11ರ ಪ್ರಕಾರ, ನೋಂದಣಾಧಿಕಾರಿಗೆ ಕೆಲವೊಂದು ತಪ್ಪುಗಳು (ಕ್ಲರಿಕಲ್ ಎರರ್) ಆಗಿದ್ದರೆ ಅಂತಹ ಸಂದರ್ಭದಲ್ಲಿ ಅಧಿಕಾರಿಗೆ ತಪ್ಪಾಗಿರುವುದು ಮನವರಿಕೆ ಆದರೆ ಅವರು ಸೆಕ್ಷನ್ 15ರಲ್ಲಿ ಲಭ್ಯವಿರುವ ಅಧಿಕಾರ ಬಳಸಿ ತಪ್ಪುಗಳನ್ನು ಸರಿಪಡಿಸಬಹುದು ಎಂದು ಪೀಠ ತಿಳಿಸಿದೆ. ಅಲ್ಲದೆ, ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಬಿಬಿಎಂಪಿ ಅಧಿಕಾರಿಗಳು 20 ದಿನಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿ, ಹೊಸ ಮರಣ ಪ್ರಮಾಣ ಪತ್ರವನ್ನು ವಿತರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಮರಣ ಪ್ರಮಾಣಪತ್ರ ವಿತರಣೆಗೆ ಪಾಲಿಕೆ ಅನುಸರಿಸುತ್ತಿರುವ ಕ್ರಮದ ಬಗ್ಗೆ ವಿವರಿಸಿ, ಒಂದು ವೇಳೆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ ಆಗ ಅದನ್ನು ಆಧರಿಸಿ ಪಾಲಿಕೆ ಮರಣಪ್ರಮಾಣಪತ್ರ ವಿತರಿಸುತ್ತದೆ. ಆದರೆ, ಆಸ್ಪತ್ರೆ ದಾಖಲೆಗಳನ್ನು ಪರಿಶೀಲನೆ ಮಾಡುವ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.

ಪ್ರಕರಣದ ಹಿನ್ನೆಲೆ ಏನು? : ಅರ್ಜಿದಾರರ ಪತಿ ಎಸ್ ಪಿ ಲಕ್ಷ್ಮೀಕಾಂತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು 2022ರ ನ.22ರಂದು ಮೃತಪಟ್ಟಿದ್ದರು.

ಬಿಬಿಎಂಪಿ ವಿತರಿಸಿದ್ದ ಅವರ ಮರಣ ಪ್ರಮಾಣಪತ್ರದಲ್ಲಿ ಕೆಲವೊಂದು ದೋಷಗಳಿದ್ದವು. ಹಾಗಾಗಿ ಸಾಯಿಲಕ್ಷ್ಮಿ ಅವರು ಬಿಬಿಎಂಪಿಗೆ ಡೆತ್ ಸರ್ಟಿಫಿಕೇಟ್‌ನಲ್ಲಿನ ದೋಷಗಳನ್ನು ಸರಿಪಡಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಆದರೆ, 2023ರ ಜ.23ರಂದು ಹಿಂಬರಹ ನೀಡಿದ್ದ ಬಿಬಿಎಂಪಿ, ಆಸ್ಪತ್ರೆ ನಮೂದಿಸಿದ್ದ ವಿವರ ಆಧರಿಸಿ ಮರಣ ಪ್ರಮಾಣಪತ್ರ ವಿತರಿಸಲಾಗಿದೆ. ಈಗ ಅದರಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲಾಗದು. ಹಾಗೆ ತಿದ್ದುಪಡಿ ಮಾಡಬೇಕಾದರೆ ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ :ಮದ್ಯದಂಗಡಿ ಪರವಾನಗಿ ರದ್ದತಿ ಕೋರಿದ ಅರ್ಜಿ ವಜಾ

ABOUT THE AUTHOR

...view details