ಬೆಂಗಳೂರು: ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರ ಅಡಿ ಮಕ್ಕಳಿಲ್ಲದ ದಂಪತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆನುವಂಶಿಕ (ಜೆನೆಟಿಕ್), ದೈಹಿಕ ಮತ್ತು ಆರ್ಥಿಕ ಸ್ಥಿತಿಗಳಗಳ ಕುರಿತು ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರ ಸೆಕ್ಷನ್ 2(1)(ಝೆಡ್ ಜಿ) ಮತ್ತು ಸೆಕ್ಷನ್ 4(3)(ಸಿ)(1)ನ ಸಿಂಧುತ್ವ ಪ್ರಶ್ನಿಸಿ ಬೆಂಗಳೂರಿನ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಆನುವಂಶಿಕ ಪರೀಕ್ಷೆಯ ಕುರಿತು ವೈದ್ಯಕೀಯ ವರದಿಗಳ ಪ್ರಕಾರ ಭ್ರೂಣಕ್ಕೆ ಆರೋಗ್ಯಕರವಾದ ವೀರ್ಯ ಮತ್ತು ಅಂಡಾಣು ಬೇಕಾಗಿರಲಿದೆ. ಹೊಸ ಸೃಷ್ಟಿಗೆ ಅಗತ್ಯವಾದ ಆನುವಂಶಿಕ ಮಾಹಿತಿ ಒಳಗೊಂಡಿದಿಯೇ ಎಂಬುದನ್ನು ತಿಳಿಸಲು ವೀರ್ಯದ ಸಾಮರ್ಥ್ಯ ಪರೀಕ್ಷೆ ಮಾಡುವುದು ಅತ್ಯಗತ್ಯ. 35 ರಿಂದ 40 ವರ್ಷವಾದ ಪುರುಷರಲ್ಲಿ ವೀರ್ಯದ ಆರೋಗ್ಯ ಕುಗ್ಗುತ್ತದೆ ಎಂದು ವೈದ್ಯಕೀಯ ತಜ್ಞರ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.
ಆದರೆ, ಅರ್ಜಿದಾರರಿಗೆ ಪ್ರಸ್ತುತ 57 ವರ್ಷ ವಯಸ್ಸಾಗಿದ್ದು, ವೀರ್ಯದ ಆರೋಗ್ಯ ತಿಳಿದುಕೊಳ್ಳಲು ಅವರು ಆನುವಂಶಿಕ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಮಗು ಪಡೆಯಲು ಬಯಸಿರುವ ದಂಪತಿಯು ಮಗುವಿನ ಕಾಳಜಿ ಮಾಡುವ ಮಟ್ಟಕ್ಕೆ ಇರಬೇಕೆ ವಿನಾ ಅವರನ್ನು ತ್ಯಜಿಸುವ ರೀತಿಯಲ್ಲಿರಬಾರದು. ಮಗುವನ್ನು ಬೆಳೆಸುವ ದೈಹಿಕ ಶಕ್ತಿಯನ್ನು ದಂಪತಿ ಹೊಂದಿರಬೇಕು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲಿಚ್ಛಿಸುವ ದಂಪತಿಯು ಆರ್ಥಿಕವಾಗಿ ಸಬಲರಾಗಿರಬೇಕು. ಮಗು ಬಡತನ ಎದುರಿಸುವಂತಾಗಬಾರದು ಎಂದು ತಿಳಿಸಿರುವ ಹೈಕೋರ್ಟ್, ಬಾಡಿಗೆ ತಾಯ್ತನಕ್ಕೆ ಮುಂದಾಗಿರುವವರು ಈ ರೀತಿಯ ಮೂರು ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ತಿಳಿಸಿದೆ.
ಇದೇ ವಿಚಾರ ಸಂಬಂಧದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಸಂದರ್ಭಲ್ಲಿ ಆ ಎರಡೂ ಸೆಕ್ಷನ್‌ಗಳನ್ನು ರದ್ದುಪಡಿಸಲಾಗದು. ಅಲ್ಲದೆ, ವಿಶೇಷ ಪರಿಸ್ಥಿತಿಯನ್ನು ಪರಿಹರಿಸಿ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ದಂಪತಿಗೆ ಅರ್ಹತಾ ಸರ್ಟಿಫಿಕೇಟ್ ನೀಡುವ ಕುರಿತು ಗೊಂದಲವನ್ನು ಸರಿಪಡಿಸಬೇಕೇ ಎಂಬುದನ್ನು ಶಾಸನಸಭೆ ನಿರ್ಧರಿಸಬೇಕು.