ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲಪ್ರತಿ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ವರದಿ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್ ಕಾಂತರಾಜು ಅವರು ತಿಳಿಸಿದ್ದಾರೆ.
ಗುರುವಾರ ಜಾತಿಗಣತಿ ವಿವಾದದ ಬಗ್ಗೆ ಮಾತನಾಡಿದ ಅವರು, ನಾನು ವರದಿ 2019ರಲ್ಲಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇರುವುದರಿಂದ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ನಾನು ಕೊಟ್ಟ ವರದಿ ನೈಜ ಹಾಗೂ ವೈಜ್ಞಾನಿಕವಾಗಿದೆ. ವರದಿ ನೋಡದೇ ಅವೈಜ್ಞಾನಿಕ ಅನ್ನೋದು ಸರಿಯಲ್ಲ. ವರದಿಯನ್ನು ಸಂಪೂರ್ಣವಾಗಿ ನೋಡಿ ಪರಿಶೀಲನೆ ನಡೆಸಿದ ಬಳಿಕ ವರದಿ ಸರಿ ಇದೆಯಾ, ಅವೈಜ್ಞಾನಿಕನಾ ಎಂಬ ಬಗ್ಗೆ ಹೇಳಬಹುದು. ಈಗಲೇ ಹೇಳುವುದು ಸರಿಯಲ್ಲ. ವರದಿಗೆ ಕಾರ್ಯದರ್ಶಿಯ ಸಹಿ ಇಲ್ಲ ಅನ್ನೋದೂ ಸರಿಯಲ್ಲ. ಅದರಲ್ಲಿ ಅನೇಕ ಸಂಪುಟಗಳಿವೆ. ಇವುಗಳಲ್ಲಿ ಒಂದು ಸಂಪುಟಕ್ಕೆ ಮಾತ್ರವೇ ಕಾರ್ಯದರ್ಶಿ ಸಹಿ ಹಾಕಿಲ್ಲ. ಸರ್ಕಾರಕ್ಕೆ ಸಲ್ಲಿಸಬಹುದೆಂದು ಅಂದು ಆಯೋಗವೂ ನಿರ್ಣಯ ತೆಗೆದುಕೊಂಡಿತ್ತು. ಆ ನಿರ್ಣಯದಲ್ಲಿ ಕಾರ್ಯದರ್ಶಿಯವರೂ ಭಾಗವಹಿಸಿದ್ದರು ಎಂದು ಕಾಂತರಾಜು ಸ್ಪಷ್ಟಪಡಿಸಿದರು.
ಸಮೀಕ್ಷೆ ವೇಳೆ 40 ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಜಾತಿ, ಲಿಂಗ, ಧರ್ಮ, ಆಸ್ತಿ-ಪಾಸ್ತಿಗೆ ಸೇರಿದ ವಿವರಗಳೊಂದಿಗೆ 55 ಬಗೆಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗಿದೆ. ನಂತರ ಕೂಲಂಕಷವಾಗಿ ಅಂಕಿ -ಅಂಶಗಳ ಸಮೇತ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.