ಬೆಂಗಳೂರು:ಮಾನ್ಯ @CTRavi_BJP ಅವರೇ, 2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. RSSನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಂಡರಿಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಬಿಜೆಪಿ ಸರ್ಕಾರ. ಒಮ್ಮೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳಿ. ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ನಾವು. ನಮ್ಮ ಕುಟುಂಬ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ಅವರ ಮನೆಗಳಿಗೆ ಬೆಳಕಾಗಿದೆ.
ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚೆನ್ನಾಗಿ ಗೊತ್ತಿದೆ ಎಂಬುದು ನನ್ನ ಭಾವನೆ. ಅಂದು ಆರ್ಎಸ್ಎಸ್ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಲಿಲ್ಲ. ಹೆಚ್.ಡಿ ಕುಮಾರಸ್ವಾಮಿಯ ನಿಸ್ವಾರ್ಥತೆಯ ಫಲಾನುಭವಿ ನೀವು. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ ಸಿ.ಟಿ. ರವಿಯವರೇ ಎಂದು ಹೇಳಿದ್ದಾರೆ.
1975ರಲ್ಲಿ ಜನಸಂಘವೂ ಜನತಾ ಪಕ್ಷದ ಮೈತ್ರಿ ಭಾಗವಾಗಿತ್ತು. ಆಗ ಜನಸಂಘದ ನಾಯಕರ ಜತೆ ದೇವೇಗೌಡರೂ ವೇದಿಕೆ ಹಂಚಿಕೊಂಡಿದ್ದರು. ಅಟಲ್, ಅಡ್ವಾಣಿ ಅವರಂತೆ ಗೌಡರೂ ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿದ್ದರು. ಆದರೆ, 1975ರ RSSʼಗೂ ಈಗಿನ RSSʼಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಮಗಿಂತ ಗೌಡರಿಗೇ ಚೆನ್ನಾಗಿ ಗೊತ್ತು ಎಂದು ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.
ಎಮರ್ಜೆನ್ಸಿ ವೇಳೆ ಜನಸಂಘವಷ್ಟೇ ಅಲ್ಲ, ಅನೇಕ ನಾಯಕರು ಜೈಲಿಗೆ ಹೋಗಿದ್ದರು. ಅಡ್ವಾಣಿ ಅವರು ಬೆಂಗಳೂರು ಜೈಲಿನಲ್ಲೇ ಇದ್ದರು. ಅಲ್ಲಿ ಅಡ್ವಾಣಿ ಅವರೊಂದಿಗಿನ ಒಡನಾಟದಿಂದ ಗೌಡರು ಹಾಗೆ ಹೇಳಿರಬಹುದು. ಎಮರ್ಜೆನ್ಸಿ ಬಳಿಕ RSS ಹೇಗೆ ಬದಲಾಯಿತೆಂಬುದು ಅವರಿಗೆ ತಿಳಿದಿದೆ. ಮೈಸೂರಿನಲ್ಲಿ ಗೌಡರು ಹೇಳಿದ್ದನ್ನೇ ಇವತ್ತು ತಿರುಚಿ ಹೇಳಬೇಡಿ.
ಗೌಡರು ಎಂದೂ ಆರ್ಎಸ್ಎಸ್ ಒಪ್ಪಿಲ್ಲ. ಹಾಗಿದ್ದಿದ್ದರೆ, ಪ್ರಧಾನಿ ಆಗಿದ್ದ ಅವರಿಗೆ ಕಾಂಗ್ರೆಸ್ ʼಕೈʼಕೊಟ್ಟಾಗ ಬೆಂಬಲಕ್ಕೆ ಬಂದ ವಾಜಪೇಯಿ ಅವರ ಆಫರ್ ಒಪ್ಪುತ್ತಿದ್ದರು. ಅಷ್ಟೇ ಏಕೆ, ಬಿಜೆಪಿ ಜತೆ ನಾನು ಸರ್ಕಾರ ರಚಿಸಿದ ಕಾರಣಕ್ಕೆ ಅವರ ಆರೋಗ್ಯ ಹಾಳಾಯಿತು. ಇದು ಆರ್ಎಸ್ಎಸ್ ಬಗ್ಗೆ ಗೌಡರು ಕಾಯ್ದುಕೊಂಡಿರುವ ಅಂತರ. ಅಪ್ರಬುದ್ಧತೆ ಇರುವುದು ಯಾರಿಗೆ? ಎಂದು ಪ್ರಶ್ನಿಸಿದ್ದಾರೆ.
ಸೇವೆ, ಸಂಸ್ಕಾರ ಆರ್ಎಸ್ಎಸ್ ನೀಡುತ್ತಿದೆ ಎನ್ನುತ್ತೀರಿ. ಆದರೆ, ಸಮಾಜಕ್ಕೆ ಬೇಕಿರುವುದು ನೆಮ್ಮದಿ, ಶಾಂತಿ, ಮಾಡುವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ. ಈ ವಿಷಯದಲ್ಲಿ ಆರ್ಎಸ್ಎಸ್ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ಬದುಕಿಗೆ ಶಿಕ್ಷಣ ಕೊಡುವುದು ಬಿಟ್ಟು ರಾಷ್ಟ್ರವನ್ನು ಒಡೆಯುವ ರೀತಿ ಮುಗ್ಧ ಮಕ್ಕಳ ಮೆದುಳು ಹಾಳು ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸೇವೆ, ಸಂಸ್ಕಾರ ಆರ್ಎಸ್ಎಸ್ ಗುತ್ತಿಗೆಯಲ್ಲ. ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?. ಇಂದಿರಾಗಾಂಧಿ, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ಜೀವತ್ಯಾಗ ಮಾಡಿದರು. ನಿಮ್ಮಲ್ಲಿ ಅಂಥವರು ಒಬ್ಬರಿದ್ದಾರಾ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೆ ಗುಂಡಿಕ್ಕಿದವರು ನೀವು. ನೀವು ಸಮಾಜದ ಉದ್ಧಾರ ಮಾಡುತ್ತೀರಾ? ಇದಕ್ಕೇ ಆರ್ಎಸ್ಎಸ್ ʼವಿಶ್ವಕುಖ್ಯಾತಿʼ ಆಗಿದ್ದು.