ಬೆಂಗಳೂರು: ಗುಂಡಿ ಮುಚ್ಚುವ ಕಡೆ ಗಮನ ಎಲ್ಲಿದೆ ಸರ್ಕಾರಕ್ಕೆ, ಬರೀ ವಸೂಲಿ ಮಾಡುವುದೇ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಗುಡುಗಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಅರಸೀಕೆರೆ ಸಮೀಪ ರಸ್ತೆ ಅಪಘಾತ ಆಯ್ತು. ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸರ್ವೆ ಮಾಡಿಸಲಿ. ರಸ್ತೆಗಳಲ್ಲಿ, ಹೈವೆ ರಸ್ತೆಯಲ್ಲಿ ಎಎಸ್ಐ ಸೇರಿ 3-4 ಮಂದಿ ಪೊಲೀಸರು ನಿಂತು ಜನರ ವಾಹನಗಳನ್ನು ನಿಲ್ಲಿಸಿ ವಸೂಲಿ ಮಾಡಲು ನಿಂತಿರುತ್ತಾರೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರು ಹಂಚಿಕೊಳ್ಳುತ್ತಾರೆ. ವಸೂಲಿ ಮಾಡುವುದಕ್ಕೆ ಈ ಸರ್ಕಾರ ನಿಂತಿದೆ ಎಂದು ಹೆಚ್ಡಿಕೆ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ಪ್ರಾರಂಭ ಆಗಿ ಭಾನುವಾರದವರೆಗೆ ನೀವೆ ಎಲ್ಲದ್ದಕ್ಕೂ ಅವಕಾಶ ಕೊಟ್ಟಿದ್ದೀರಾ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋರು ನೀವೆ (ಸರ್ಕಾರ), ಹೋಟೆಲ್ಗೆ ರಾತ್ರಿ ಅನುಮತಿ ಕೋಡೋದು ನೀವು. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡುವವರು ನೀವೆ ಎಂದು ಕಿಡಿಕಾರಿದರು.
ಕೆ. ಆರ್ ಪೇಟೆ ತಾಲೂಕಿನಲ್ಲಿ ಕುಂಬ ಮೇಳ ನಡೆಯುತ್ತಿದ್ದು, ಈ ವೇಳೆ ಹಾಕಿದ್ದ ಡಾಂಬಾರು ಕಿತ್ತು ಹೋಗಿದೆಯಂತೆ. ಸ್ವಾಮೀಜಿಗಳು ಎಲ್ಲರೂ ಅಲ್ಲೆ ಇದ್ದರು. ಡಾಂಬಾರು ಹಾಕಿರುವುದರಲ್ಲಿ 40% ಆಗಿದೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಸರ್ಕಾರದ ಕೆಲಸ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೆ ಬಲಿಯಾದ ವಿಚಾರಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಹೆಚ್. ಡಿ ಕುಮಾರಸ್ವಾಮಿ ಅವರು, ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಸ್ಥಿತಿ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ. ಇಂತಹ ಕಾನ್ಫರೆನ್ಸ್ ಎಷ್ಟೋ ಆಗಿದೆ. ಆದರೆ ಗುಂಡಿ ಮಾತ್ರ ಮುಚ್ಚಿಲ್ಲ. ಜನರ ಜೀವನ ಕಾಪಾಡುವ ಕೆಲಸ ಈ ಸರ್ಕಾರ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಳೆ ಬಂದಿರುವುದು ನಿಜ. ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರ್ಕಾರ ಮಾಡಿಕೊಂಡಿಲ್ಲ. ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಎಲ್ಲವೂ ಸರಿ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಂತಹ ಕೆಲಸ ಆಗ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜನರ ಭಾವನೆ ಜೆಡಿಎಸ್ ಪರ : ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಅವರನ್ನು ಕರೆಸಿ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮೈಸೂರಿನಲ್ಲಿ ಅ. 19-20 ರಂದು 126 ಅಭ್ಯರ್ಥಿಗಳಿಗೆ ಕಾರ್ಯಾಗಾರ ಇದೆ. ಈ ಕಾರ್ಯಾಗಾರದಲ್ಲಿ ಬಿಡದಿಯಲ್ಲಿ ಕೊಟ್ಟ ಟಾಸ್ಕ್ ಪೂರ್ಣ ಮಾಡಿದ್ದಾರಾ ಎಂಬುದರ ಬಗ್ಗೆ ಚೆಕ್ ಮಾಡುತ್ತೇವೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಅಂತ ಸೂಚನೆ ಕೊಡುತ್ತೇವೆ. ಬಿಜೆಪಿ-ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜೆಡಿಎಸ್ ಪರ ಜನರ ಭಾವನೆ ಇದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅಂತ ಜನರ ಮನಸ್ಸಿನಲ್ಲಿ ಇದೆ. ಹೀಗಾಗಿ ಸಭೆ ಮಹತ್ವವಾಗಿದೆ ಎಂದು ಹೇಳಿದರು.
ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನವೆಂಬರ್ 1 ರಿಂದ ಪ್ರಾರಂಭ ಆಗುತ್ತದೆ. 2-3 ಹಂತದಲ್ಲಿ ರಥಯಾತ್ರೆ ಇರುತ್ತದೆ. ನವೆಂಬರ್ 1 ರಿಂದ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ಪಂಚರತ್ನ ರಥಯಾತ್ರೆ ನಡೆಯುತ್ತದೆ ಎಂದು ತಿಳಿಸಿದರು.
ಯಾರೋ ಮಾಡುವ ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ : ಯಾರೋ ಮಾಡುವ ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ. ನನ್ನ ಗುರಿ 123 ಅದಕ್ಕೆ ನಾವು ಕೆಲಸ ಮಾಡುತ್ತೇವೆ. ನಾವು ಕೂಡಾ ಸರ್ವೆ ಮಾಡಿಸುತ್ತಿದ್ದೇವೆ. 30-40 ಕ್ಷೇತ್ರ ಸರ್ವೆ ಆಗಿದೆ. ಅಲ್ಲಿ ಕೆಲ ಗೊಂದಲ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಸರ್ವೆ ರಿಪೋರ್ಟ್ ನಮ್ಮ ಪರ ಇದೆ ಅಂತ ಮೈಮರೆಯೋದು ಬೇಡ. ಸರ್ವೆ ನೆಗೆಟಿವ್ ಇರಲಿ ಪಾಸಿಟಿವ್ ಇರಲಿ. ನಾವು ಚುನಾವಣೆ ಗೆಲ್ಲುವುದಕ್ಕೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮನೆ, ಮನೆಗೆ ಕನ್ನಡ ಬಾವುಟ : ನವೆಂಬರ್ 1 ರಂದು ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕು. ಬುಧವಾರ ಈ ಸಂಬಂಧ ಸಭೆ ಕರೆಯಲಾಗಿದೆ. ಅದರಲ್ಲಿ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮದ ರೂಪುರೇಷೆ ಸಿದ್ದ ಮಾಡುತ್ತೇವೆ ಎಂದರು.
ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಬಿಡುಗಡೆ ಮಾಡಿದ್ದ ಹಣ ಸಿ. ಪಿ ಯೋಗೇಶ್ವರ್ ತಡೆ ಹಿಡಿಯಲು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಇಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅವರು ಖುಷಿಗೆ ಇಂತಹದ್ದನ್ನು ಮಾಡುತ್ತಿರುತ್ತಾರೆ. ಇದರಿಂದ ಚನ್ನಪಟ್ಟಣದಲ್ಲಿ ಮತ ಬೀಳೋದಿಲ್ಲ. ಅವರ ಖುಷಿಗೆ ಅದನ್ನ ಮಾಡಿಕೊಳ್ಳಲಿ ಬಿಡಿ ಎಂದು ಪರೋಕ್ಷವಾಗಿ ಯೋಗೇಶ್ವರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಓದಿ:ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್ಸೆಟ್ಗಳಿಗೆ 24/7 ಉಚಿತ ವಿದ್ಯುತ್ : ಹೆಚ್ ಡಿ ಕುಮಾರಸ್ವಾಮಿ