ಬೆಂಗಳೂರು:ಆಜಾನ್ - ಭಜನೆ ಸಂಘರ್ಷ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಸಂಬಂಧ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಜಾನ್ - ಭಜನೆ ಸಂಘರ್ಷದ ಬಗ್ಗೆ ತುರ್ತು ಸಭೆ ನಡೆಸಿದರು.
ಈ ವೇಳೆ ಮಾರ್ಗಸೂಚಿ ಹೊರಡಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಸಿಎಂ ಅಧಿಕಾರಿಗಳಿಗೆ ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಇದೇ ವೇಳೆ ಸೂಚನೆ ನೀಡಿದರು. ಸಭೆಯಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ, ಕಾನೂನು ಬಾಹಿರವಾಗಿ ಲೌಡ್ ಸ್ಪೀಕರ್ ಅಳವಡಿಸಿರುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಅದಕ್ಕಾಗಿ ಅವರಿಗೆ 15 ದಿನ ಅಥವಾ 1 ತಿಂಗಳು ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಅನುಮತಿ ಪಡೆಯದೇ ಇದ್ದರೆ ಅಂತಹ ಧ್ವನಿವರ್ಧಕಗಳನ್ನು ತೆರವು ಮಾಡಲಾಗುವುದು.