ಕರ್ನಾಟಕ

karnataka

By

Published : Jul 8, 2022, 9:42 PM IST

ETV Bharat / state

ವೈನ್ ತಯಾರಿಕೆಗೆ ಉತ್ತೇಜನ, ರಫ್ತು ಹೆಚ್ಚಿಸಲು ಕ್ರಮ: ಸಿಎಂ ಬೊಮ್ಮಾಯಿ

ನೂತನವಾಗಿ ನಿರ್ಮಾಣವಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿ ಕಾರ್ಗೊ ವಿಮಾನ ಸೇವೆ ಒದಗಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಹೇಳಿದರು.

govt-will-encourage-wine-production-and-increase-exports-says-cm-bommai
ವೈನ್ ತಯಾರಿಕೆಗೆ ಉತ್ತೇಜನ, ರಫ್ತು ಹೆಚ್ಚಿಸಲು ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ವೈನ್ ತಯಾರಿಕೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡಲು ಹಾಗೂ ರಫ್ತು ಅವಕಾಶ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ವಿವಿಧ ಸೌಲಭ್ಯ ಒದಗಿಸುವ ಕುರಿತು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಭಾಗವಹಿಸಿದ್ದ ದ್ರಾಕ್ಷಿ ಬೆಳೆಗಾರರು ವಿಜಯಪುರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ 1 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯ ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಸಿಎಂ, ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸೃಜಿಸಲು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಿದರು. ಮಂಡಳಿಯ ಹೆಸರಿನಲ್ಲಿ ವೈನ್ ಪಾರ್ಕ್​ನಲ್ಲಿ ಒಟ್ಟು 141.28 ಎಕರೆ ಜಮೀನು ಇದ್ದು, ಇದರಲ್ಲಿ ಶೈತ್ಯ ಸಂಗ್ರಹಾಗಾರ ನಿರ್ಮಿಸಲು 6 ಎಕರೆ ಜಮೀನು ಗುರುತಿಸಲಾಗಿದೆ.

ಅಲ್ಲದೇ, ದ್ರಾಕ್ಷಿ ಬೆಳೆಗಾರರ ಸಂಘಗಳ ಮೂಲಕವೂ ಶೈತ್ಯ ಸಂಗ್ರಹಾಗಾರ ನಿರ್ಮಿಸಲು ಹಾಗೂ ಈ ಸಂಘಗಳಿಗೆ ಎನ್​​ಎಚ್ಎಂ ಅಡಿ ಸಹಾಯಧನ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಸಿ ದ್ರಾಕ್ಷಿಗೆ ಮಾರುಕಟ್ಟೆ ಸೌಲಭ್ಯ ವಿಸ್ತರಿಸಲು ರೆಫ್ರಿಜರೇಟರ್ ಕಂಟೇನರ್ ಇರುವ ರೈಲು ಸೇವೆ ಒದಗಿಸಲು ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ ಸಿಎಂ, ಇದರೊಂದಿಗೆ ಒಣ ದ್ರಾಕ್ಷಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಹಾಗೂ ರಫ್ತು ಉತ್ತೇಜನಕ್ಕೆ ಕ್ರಮ ವಹಿಸಲಾಗುವುದು. ಬ್ರಾಂಡಿಂಗ್, ಪ್ಯಾಕೇಜಿಂಗ್ ಮೊದಲಾದ ವಿಷಯಗಳಲ್ಲಿ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ವೈನ್ ಪಾರ್ಕ್​ ನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆರೆಯಲ್ಲಿ ಬೋಟಿಂಗ್ ಮತ್ತಿತರ ಮನರಂಜನೆ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ಡಿಪಿಆರ್​ ಸಿದ್ಧಪಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸಿಎಂ ಸೂಚಿಸಿದರು. ನೂತನವಾಗಿ ನಿರ್ಮಾಣವಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿ ಕಾರ್ಗೊ ವಿಮಾನ ಸೇವೆ ಒದಗಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದೂ ಹೇಳಿದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್, ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಕೇವಲ್ ಚಂದ್ ಬನ್ಸಾಲಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಭಾಗವಹಿಸಿದ್ದರು.

ಇದನ್ನೂ ಓದಿ:ರಾಜ್ಯ ಸರ್ಕಾರ ಎಥನಾಲ್ ನೀತಿ ರೂಪಿಸುತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details