ಕರ್ನಾಟಕ

karnataka

ETV Bharat / state

ಪಂಚಪೀಠಗಳ ಅಭಿವೃದ್ಧಿಗೆ ಬಟೆಟ್​​ನಲ್ಲಿ ಅಗತ್ಯ ನೆರವು: ಸಿಎಂ ಬಸವರಾಜ ಬೊಮ್ಮಾಯಿ - Kannada News

ಪಂಚಪೀಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಯಾವ ಧರ್ಮ ಮನುಜರನ್ನು ಕೂಡಿಸಬೇಕೋ ಅದೇ ಧರ್ಮದ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯಾಗುತ್ತಿರುವುದು ಆತಂಕದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

basavaraj bommai
ಬಸವರಾಜ ಬೊಮ್ಮಾಯಿ

By

Published : Jan 14, 2023, 7:00 AM IST

ಬೆಂಗಳೂರು/ಶ್ರೀಶೈಲ: ಪಂಚ ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ. ಬಜೆಟ್​ನಲ್ಲಿ ಶ್ರೀಶೈಲ ಅಭಿವೃದ್ಧಿಗೆ ಮತ್ತಷ್ಟು ನೆರವು ನೀಡಲಿದ್ದು, ಉಳಿದ ಪೀಠಗಳಿಗೂ ಭೇಟಿ ನೀಡಿ ಅಗತ್ಯ ನೆರವು ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆಂಧ್ರದ ಶ್ರೀಶೈಲಂನಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ ಆಯೋಜಿಸಿರುವ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಗದ್ಗುರುಗಳು ಸಣ್ಣ ವಯಸ್ಸಿನವರಾದರೂ ದೊಡ್ಡ ಸಾಧನೆ ಮಾಡುವ ಶಕ್ತಿ ಅವರಿಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜೊತೆ ನಿಲ್ಲಬೇಕಿದೆ. 500 ಕಿಮೀ ಪಾದಯಾತ್ರೆ ಮಾಡಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಂಬಿ ಮಂಟಪ, ಕಲ್ಯಾಣ ಮಂಟಪ ಮೊದಲ ಹೆಜ್ಜೆಯಾಗಿದೆ. ಶಾಲೆ, ಆಸ್ಪತ್ರೆ ನಿರ್ಮಾಣದ ಸಂಕಲ್ಪಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಈಗಾಗಲೇ 5 ಕೋಟಿ ರೂ. ಮಂಜೂರು ಮಾಡಿದ್ದು, ಮುಂದಿನ ಬಜೆಟ್​ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಎಲ್ಲಿಯೂ ಕೆಲಸ ನಿಲ್ಲದಂತೆ ಎಲ್ಲರೂ ಮನಸ್ಸು ಮಾಡಬೇಕು. ಎಲ್ಲಾ ಪೀಠಗಳಿಗೆ ಭೇಟಿ ನೀಡಲಾಗುವುದು ಎಂದರು.

ಶ್ರೀ ಕ್ಷೇತ್ರದ ಅಭಿವೃದ್ಧಿಯಾಗಬೇಕು: ಈ ದೇಶದಲ್ಲಿ ಅತಿ ಹೆಚ್ಚು ಭಕ್ತಿ ಚಳವಳಿಗಳಾಗಿವೆ. ಭಕ್ತಿಯ ಮಾರ್ಗದ ವಿಭಿನ್ನ ಚಳವಳಿಗಳು ಆಗಿದ್ದರೂ ಅಂತಿಮವಾಗಿ ಬೇಕಿರುವುದು ಮನ ಪರಿವರ್ತನೆ. ತಾಂತ್ರಿಕತೆ ಹಾಗೂ ನಾಗರಿಕತೆಯ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಯಾವುದಕ್ಕಾಗಿ ಹುಟ್ಟು, ಬದುಕು ಸನ್ಮಾನ ತೋರಿಸಲು ಪಂಚ ಪೀಠಾಧ್ಯಕ್ಷರು ಸಂಚಾರ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಬದುಕಿನ ಉನ್ನತೀಕರಣ ಮಾಡಿಕೊಳ್ಳಬೇಕು. ಶ್ರೀಶೈಲ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಈ ಕ್ಷೇತ್ರ, ಚನ್ನಮಲ್ಲಿಕಾರ್ಜುನನ ಸ್ಥಾಪಿತ ಕ್ಷೇತ್ರದಲ್ಲಿ ಧರ್ಮ ಪ್ರಚಾರವಾಗುತ್ತಿದ್ದು 12 ನೇ ಶತಮಾನದ ಶಿವಶರಣರ ಅನುಭಾವದ ಸಂಗಮವನ್ನು ಕಾಣುತ್ತೇವೆ. ಅಲ್ಲಮಪ್ರಭು, ಅಕ್ಕಮಹಾದೇವಿ, ದೇವರ ದಾಸಿಮಯ್ಯರ ಸಂಬಂಧವಿದೆ. ಶರಣರ ಸಂಬಂಧ, ಸ್ಥಾಪಿತ ಧರ್ಮ ಪೀಠವೂ ಇದೆ. ಇದರ ಸಮನ್ವಯ ಜನರಿಗೆ ಧರ್ಮ, ನ್ಯಾಯ, ನೀತಿಯ ಬದುಕಿನ ಇತಿಹಾಸವಿದೆ. ಈ ಕ್ಷೇತ್ರ ಅಭಿವೃದ್ಧಿ ಅತ್ಯಗತ್ಯ ಎಂದು ತಿಳಿಸಿದರು.

ಭಕ್ತರ ಮನೆ ಬಾಗಿಲಿಗೆ ಪೀಠ: ಜ್ಯೋತಿರ್ಲಿಂಗಗಳಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ಅತ್ಯಂತ ಮಹತ್ವವನ್ನು ಪಡೆದಿದೆ. ಪಂಚಪೀಠಗಳಲ್ಲಿ ಒಂದು ಪೀಠ ಸ್ಥಾಪಿತವಾಗಿ ಮಲ್ಲಿಕಾರ್ಜುನನ ಭಕ್ತಿ ಇಡೀ ಜಗತ್ತಿಗೆ ಸಾರುವ ಕೆಲಸವನ್ನು ಈ ಪೀಠ ಮಾಡಿಕೊಂಡು ಬಂದಿದೆ. ಇಂದಿನ ಜಗದ್ಗುರುಗಳು ಅತ್ಯಂತ ಕಷ್ಟ ಕಾಲದಲ್ಲಿ ಪೀಠ ಅಭಿವೃದ್ಧಿಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಈ ಪಂಚಪೀಠಗಳು ಭಕ್ತರಿಂದ ದೂರವಾಗಿವೆ. ದೊಡ್ಡ ಸಮೂಹವಿದ್ದರೂ ಇವುಗಳ ಅಭಿವೃದ್ಧಿ ವೇಗದಲ್ಲಿ ಆಗಿಲ್ಲ. ಆದರೆ, ಈಗಿನ ಜಗದ್ಗುರುಗಳು ಭಕ್ತರ ಮನೆಯ ಬಾಗಿಲಿಗೆ ಸಂಚರಿಸಿ ಆಶೀರ್ವಾದ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ. ಭಕ್ತರ ಬಳಿಗೆ ಜಗದ್ಗುರುಗಳು ಹೋದರೆ ಭಕ್ತರಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ. ಪೀಠಗಳ ಅಭಿವೃದ್ಧಿಯ ಅವಶ್ಯಕತೆ ಇದೆ ಎಂದರು.

ಭಕ್ತರಿಗೆ ವ್ಯವಸ್ಥೆ: ಕರ್ನಾಟಕದಿಂದ ಪ್ರತಿದಿನ ಸಾವಿರಾರು ಜನ ಕಾಶಿಗೆ ಹೋಗುತ್ತಾರೆ. ಅಲ್ಲಿಯ ಜಂಗಮ ಮಠ ಬಿಟ್ಟರೆ ಕನ್ನಡಿಗರಿಗೆ ಬೇರೆ ಸ್ಥಳವಿಲ್ಲ. ಶ್ರೀ ಶೈಲಕ್ಕೆ ಬಂದರೆ ಶ್ರೀಮಠದ ಆಶ್ರಯ. ಉಜ್ಜಯನಿ ಮಠವೂ ಹಾಗೆ ಇದೆ. ಪೀಠಗಳ ಅಭಿವೃದ್ಧಿ ಹಾಗೂ ಭಕ್ತರಿಗೆ ವ್ಯವಸ್ಥೆಗಳೂ ಆಗಬೇಕು. ಪರಮಪೂಜ್ಯರು ಭಕ್ತರ ಬಳಿಗೆ ಹೋಗುವ ಕಾರ್ಯ ಮುಂದುವರೆಯಬೇಕು. ಆಗ ಗುರು ಮತ್ತು ಭಕ್ತರಿಗೆ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಭಕ್ತರ ಏಳಿಗೆ ಗುರುಗಳಿಗೆ ಬಹಳ ಮುಖ್ಯ. ಈ ದೇಶದಲ್ಲಿ ಆಚಾರ್ಯರಿದ್ದಾರೆ, ಆಚರಣೆ ಬೇಕಾಗಿದೆ. ತತ್ವ ಆದರ್ಶಗಳನ್ನು ಆಚರಣೆ ಮಾಡುವ ಭಕ್ತ ಸಮೂಹ ಬೇಕು. ಈ ದೇಶಕ್ಕೆ ಚರಿತ್ರೆ ಇದೆ, ಚಾರಿತ್ರ್ಯ ಬೇಕಾಗಿದೆ. ಚಾರಿತ್ರ್ಯವಂತ ಸಮಾಜದ ಮೂಲಕ ದೇಶದ ಮೌಲ್ಯ ಹೆಚ್ಚಾಗುತ್ತದೆ. ವಿಶ್ವದಲ್ಲಿ ನಮ್ಮದೇ ಆದ ಸುಸಂಸ್ಕೃತವಾದ, ಸಂಬಂಧಗಳಿಗೆ ಗೌರವ ನೀಡುವ ಸಮಾಜ ಎಂದು ಗುರುತಿಸಲಾಗಿದೆ. ಅದನ್ನು ಕಾಪಾಡಲು ಆಚರಣೆ, ಚರಿತ್ರೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಗಡಿ ವಿಚಾರದಲ್ಲಿ ಚೀನಾದಿಂದ ವಿನಾಕಾರಣ ಗೊಂದಲ ಸೃಷ್ಟಿ: ವೀರಸೋಮೇಶ್ವರ ಶಿವಾಚಾರ್ಯ ಶ್ರೀ

ಧರ್ಮದ ಹೆಸರಿನಲ್ಲಿ ಸಂಘರ್ಷ: ಧರ್ಮದ ಹೆಸರಿನಲ್ಲಿ ಬಹಳಷ್ಟು ಸಂಘರ್ಷವಾಗುತ್ತಿದೆ. ಯಾವ ಧರ್ಮ ಮನುಜರನ್ನು ಕೂಡಿಸಬೇಕೋ ಅದೇ ಧರ್ಮದ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯಾಗುತ್ತಿರುವುದು ಆತಂಕದ ಸಂಗತಿ. ಹಿಂಸೆ, ಅತ್ಯಾಚಾರ, ಅನಾಚಾರಗಳಿಗೆ ಧರ್ಮದ ಲೇಪನ ನೀಡಿ ಸ್ವರ್ಗ ಸಿಗುತ್ತದೆ ಎನ್ನುವುದನ್ನು ಕಂಡಾಗ ಭಯವಾಗುತ್ತದೆ. ಈ ಮನುಕುಲವನ್ನು ಉಳಿಸಲು ಮನಪರಿವರ್ತನೆ ಬಹಳ ಮುಖ್ಯ. ಇದು ಪರಮಪೂಜ್ಯರಿಂದ ಮಾತ್ರ ಸಾಧ್ಯ. ಎಂತಹ ಕಠಿಣ ಮನಸ್ಸಿದ್ದರೂ ಅವರಿಗೆ ಅರಿವು ಮೂಡಿಸಿದಾಗ ಮಾತ್ರ ಮನ ಪರಿವರ್ತನೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಜ್ಜಯನಿಯ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲಂನ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮಾತೆ ಆಸ್ತಿ ಕಬಳಿಸಲು ಸಂಚು ಮಾಡುತ್ತಿದ್ದಾರೆ ಎಂಬುದು ಸುಳ್ಳು ಆರೋಪ: ಗಂಗಾಮಾತೆ ಸ್ಪಷ್ಟನೆ

ABOUT THE AUTHOR

...view details