ಬೆಂಗಳೂರು: ಖಾಸಗಿ ಸಂಘ ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಸರ್ಕಾರಿ ಜಮೀನುಗಳನ್ನು ಗುತ್ತಿಗೆ ಪಡೆದ ಸಂಸ್ಥೆಗೆ ಖಾಯಂ ಆಗಿ ಮಂಜೂರು ಮಾಡಲು ಸರ್ಕಾರ ಆದೇಶ ನೀಡಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19ರಡಿಯಲ್ಲಿ ಸರ್ಕಾರಿ ಜಮೀನುಗಳನ್ನು ವಿವಿಧ ಉದ್ದೇಶಗಳಿಗೆ ಗರಿಷ್ಠ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿ ಮುಕ್ತಾಯವಾದ ತರುವಾಯ ಗುತ್ತಿಗೆ ಅವಧಿಯನ್ನು ಸಂಸ್ಥೆ ಪರಿಸ್ಥಿತಿಗೆ ಅನುಗುಣವಾಗಿ ಕೋರಿಕೆಯ ಮೇರೆಗೆ ಇನ್ನೂ 5 ವರ್ಷಗಳ ಕಾಲ ನವೀಕರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆ.
ಹಿಂದಿನಿಂದಲೂ ಕಂದಾಯ ಇಲಾಖೆ ಒಡೆತನದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಗೆ ತರಬೇಕಿರುವುದರಿಂದ ಖಾಸಗಿ ಸಂಘ-ಸಂಸ್ಥೆಗಳಿಗೆ ವಿವಿಧೋದ್ದೇಶಗಳಿಗೆ ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಅದೇ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಪ್ರಸ್ತುತ ಮಾರ್ಗಸೂಚಿ ಮೌಲ್ಯವನ್ನು ವಿಧಿಸಲು, ಅನ್ಯ ಉದ್ದೇಶಕ್ಕೆ ಖಾಯಂ ಮಂಜೂರಾತಿ ಕೋರಿದ್ದಲ್ಲಿ, ಮಾರ್ಗಸೂಚಿ ಮೌಲ್ಯದ ಎರಡು ಪಟ್ಟು ಮೊತ್ತ ವಿಧಿಸಿ ಒಂದು ಬಾರಿ ಮಾತ್ರ ಅನ್ವಯಿಸುವಂತೆ ಖಾಯಂ ಮಂಜೂರು ಮಾಡುವ ಮುಖಾಂತರ ಸಂಪನ್ಮೂಲ ಕ್ರೋಢೀಕರಿಸಲು ಸರ್ಕಾರ ಉದ್ದೇಶಿಸಿದೆ.
ಗುತ್ತಿಗೆ ನೀಡಲಾಗಿರುವ ಜಮೀನುಗಳನ್ನು ಖಾಯಂ ಮಂಜೂರಾತಿ ಪಡೆಯಲು ಇಚ್ಚಿಸಿದಲ್ಲಿ, ಅಂತಹ ಗುತ್ತಿಗೆ ಜಮೀನುಗಳನ್ನು ಸ್ಥಳ ಪರಿವೀಕ್ಷಣೆ ನಡೆಸಿ, ಉಪಯೋಗಿಸದೇ ಖುಲ್ಲಾ ಉಳಿಸಲಾಗಿರುವ ವಿಸ್ತೀರ್ಣದ ಜಮೀನುಗಳನ್ನು ಪುನಃ ಸರ್ಕಾರ ವಶಕ್ಕೆ ಪಡೆಯಲು ಸಹ ನಿರ್ಣಯಿಸಲಾಗಿದೆ.