ಬೆಂಗಳೂರು:ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುವ ಸಂಬಂಧ ರಾಜ್ಯ ಸರಕಾರ ಕಾರ್ಯೋನ್ಮುಖವಾಗಿದೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗುರುವಾರ ಖನಿಜ ಭವನದಲ್ಲಿ ಹೊಸ ಕೈಗಾರಿಕಾ ನೀತಿ ಕುರಿತಂತೆ ಕೈಗಾರಿಕೋದ್ಯಮಿಗಳ ಸಭೆ ಕರೆದು ಚರ್ಚೆ ನಡೆಸಿದರು.
ಸಭೆಯಲ್ಲಿ ಎಫ್‍ಕೆಸಿಸಿಐ, ಕಾಸಿಯಾ ಸೇರಿದಂತೆ 50ಕ್ಕೂ ಹೆಚ್ಚಿನ ಕೈಗಾರಿಕೆಗಳ ಸಂಘದ ಮುಖ್ಯಸ್ಥರು ಭಾಗವಹಿಸಿ, ಹೊಸ ಕೈಗಾರಿಕೆ ನೀತಿ ಹೇಗಿರಬೇಕೆನ್ನುವ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿ, ಕೆಲವು ಅಮೂಲ್ಯ ಸಲಹೆಗಳನ್ನು ಸಹ ನೀಡಿದರು.
ಕೈಗಾರಿಕೋದ್ಯಮ ಸಂಘಗಳ ಸಭೆ ಬಳಿಕ ಮಾತನಾಡಿದ ಸಚಿವರು, ನೂತನ ಕೈಗಾರಿಕಾ ನೀತಿ ಹಿನ್ನೆಲೆಯಲ್ಲಿ ಕೈಗಾರಿಕಾ ಸಂಘಟನಾ ಮುಖ್ಯಸ್ಥರು ನೀಡಿರುವ ಎಲ್ಲಾ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಅವುಗಳನ್ನು ಕೈಗಾರಿಕಾ ನೀತಿಯಲ್ಲಿ ಅಗತ್ಯತೆಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ರಾಜ್ಯದಲ್ಲಿ ಇರುವ ಕೈಗಾರಿಕಾ ನೀತಿ ಈ ವರ್ಷಾಂತ್ಯಕ್ಕೆ ಅಂತ್ಯಗೊಳ್ಳಲಿದೆ. ನೂತನ ಪಾಲಿಸಿಗೆ ಸಿದ್ಧತೆ ನಡೆಸಲಾಗುತ್ತಿದೆ. ಕೈಗಾರಿಕೆಯಲ್ಲಿ ಮುಂದಿರುವ ಇತರೆ ರಾಜ್ಯಗಳಲ್ಲಿನ ಕೈಗಾರಿಕಾ ನೀತಿಯನ್ನು ಅಧ್ಯಯನ ನಡೆಸಿ, ಉತ್ತಮ ಅಂಶಗಳನ್ನು ನಮ್ಮ ಪಾಲಿಸಿಯಲ್ಲೂ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಇದರ ಭಾಗವಾಗಿ ರಾಜ್ಯದ ಎಲ್ಲಾ ಕೈಗಾರಿಕಾ ಅಸೋಸಿಯೇಷನ್‍ನ ಮುಖ್ಯಸ್ಥರನ್ನು ಈ ಸಭೆಗೆ ಆಹ್ವಾನಿಸಿ ಸಲಹೆಯನ್ನು ಸ್ವೀಕರಿಸಿದ್ದೇನೆ. ನೂತನ ಪಾಲಿಸಿ ಕರಡು ಸಿದ್ಧವಾದ ಬಳಿಕ ಮತ್ತೊಂದು ಸುತ್ತು ಎಲ್ಲಾ ಕೈಗಾರಿಕಾ ಸಂಘಟನೆಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.