ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ಸಿಲಿಕಾನ್ ಸಿಟಿ ಮಂದಿ ಕೂಡ ಈ ಬಾರಿಯ ಹೊಸ ವರ್ಷವನ್ನ ಬರ ಮಾಡಿಕೊಳ್ಳಲು ಕಾತುರದಿಂದ ಕಾಯ್ತಾ ಇದ್ದಾರೆ. ಆದ್ರೆ ಈ ಬಾರಿ ಯಾವುದೇ ರೀತಿಯಲ್ಲಿ ಮನೆಯಿಂದ ಹೊರಗೆ ಬಂದು ಹೊಸ ವರ್ಷಾಚರಣೆ ಮಾಡದಂತೆ ಸರ್ಕಾರ ನಿರ್ಬಂಧಗಳನ್ನ ಹಾಕಿದೆ.
ಹೊಸ ವರ್ಷ ಅಂದರೆ ಎಲ್ಲರಿಗೂ ಒಂದು ಹೊಸ ಉತ್ಸಾಹ ಹೊಸ ಉಲ್ಲಾಸ ಬರುತ್ತೆ. ಕಳೆದ ವರ್ಷ ಪೂರ್ತಿ ಲಾಕ್‌ಡೌನ್‌ನಲ್ಲೇ ಕಳೆಯಲಾಗಿತ್ತು. ಅದೆಷ್ಟೋ ಕುಟುಂಬಗಳು ತಮ್ಮ ಆಪ್ತರನ್ನ ಕೊರೊನಾ ಕಾರಣದಿಂದಾಗಿ ಕಳೆದುಕೊಂಡಿದ್ದಾರೆ. ಅದೆಷ್ಟೋ ಬಾಕಿ ಉಳಿದಿದ್ದ ಕೆಲಸಗಳನ್ನು ಈ ಹೊಸ ವರ್ಷಕ್ಕೆ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ.
ನಗರದ ಹಾಟ್ ಸ್ಪಾಟ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಓದಿ:ನಾಳೆ ಸಿಎಂ ಸುದ್ದಿಗೋಷ್ಠಿ: ರೂಪಾಂತರ ವೈರಸ್ ಕುರಿತು ಪ್ರಕಟವಾಗುತ್ತಾ ಮಹತ್ವದ ನಿರ್ಧಾರ?
ಕೆಲವು ಜನ 31ರ ರಾತ್ರಿ ತಮ್ಮ ನ್ಯೂ ಇಯರ್ ಸೆಲೆಬ್ರೇಟ್ ಮಾಡಬೇಕು ಅಂತ ಬೇರೆ ಊರುಗಳಿಗೆ ಹೋಗುತ್ತಾರೆ. ಇನ್ನು ಕೆಲವರು ಪಬ್ - ಕ್ಲಬ್ ಅಂತ ಹೋಗುತ್ತಾರೆ. ಅದ್ರಲ್ಲೂ ಪ್ರತಿಷ್ಠಿತ ಎಂ.ಜಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಗೆ ಸಾವಿರಾರು ಸಂಖ್ಯೆಯಲ್ಲಿ ಹೋಗುತ್ತಾರೆ. ಆದರೆ ಈ ಎಲ್ಲ ಮೋಜು ಮಸ್ತಿಗೆ ಸರ್ಕಾರ ಬ್ರೇಕ್ ಹಾಕಿದೆ. ಗುಂಪಲ್ಲಿ ಜನ ಸೇರಿದರೆ ಕೊರೊನಾ ರೋಗಕ್ಕೆ ತುತ್ತಾಗಬಹುದು. ಇದರ ಜೊತೆಗೆ ಇದೀಗ ಬ್ರಿಟನ್‌ನಿಂದ ಬಂದಿರುವ ರೂಪಾಂತರಗೊಂಡ ಹೊಸ ವೈರಾಣುವಿಗೆ ತುತ್ತಾಗುವುದನ್ನ ತಪ್ಪಿಸಲು ಸರ್ಕಾರ ಮುಂದಾಗಿದೆ. ನಾಳೆಯಿಂದ ಸೆ.144 ಕೂಡ ಜಾರಿಯಾಗಲಿದೆ.
ಹೊಸ ವರ್ಷಕ್ಕೆ ಸಾಮಾನ್ಯವಾಗಿ ಎಂ.ಜಿ.ರಸ್ತೆಗೆ ಬೆಂಗಳೂರು ಜನತೆ ಸಾಕಷ್ಟು ಸಂಖ್ಯೆಯಲ್ಲಿ ಹೋಗುತ್ತಿದ್ದರು. ಆದ್ರೆ ಈ ಬಾರಿ ಅಲ್ಲಿಯೂ ಜನರು ಹೋಗದಂತೆ ಬಿಬಿಎಂಪಿ ಆದೇಶ ನೀಡಿತ್ತು. ಹೀಗಾಗಿ ಅಲ್ಲಿಗೆ ಜನರು ಬಾರದಂತೆ ಮತ್ತು ಅಹಿತಕಾರಿ ಘಟನೆ ನಡೆಯದಂತೆ ನಗರ ಪೊಲೀಸ್ ಇಲಾಖೆ, ಬಿಬಿಎಂಪಿ ಸೂಕ್ತ ಕ್ರಮಗಳನ್ನ ಕೈಗೊಂಡಿದೆ. ಇಲಾಖೆ ವತಿಯಿಂದ ನೂರಾರು ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಸುತ್ತ - ಮುತ್ತಲಿನ ಸ್ಥಳಗಳಿಗೆ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಜೊತೆಗೆ ಈ ಸ್ಥಳಗಳಲ್ಲಿರುವ ಹೋಟೆಲ್, ಪಬ್, ರೆಸ್ಟೋರೆಂಟ್‌ಗಳಿಗೂ ಕೂಡ ಸರ್ಕಾರ ಆದೇಶ ನೀಡಿದ್ದು, ಕೇವಲ ಶೇ, 50ರಷ್ಟು ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ನೀಡಿದೆ.
ರಾತ್ರಿ ಊಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ರೀತಿಯ ಆಚರಣೆಗೆ ಅವಕಾಶವಿಲ್ಲ. ಇನ್ನುಳಿದಂತೆ ಬೆಂಗಳೂರಿನ ಬೇರೆ ಹೋಟೆಲ್ ರೆಸ್ಟೋರೆಂಟ್‌ಗಳಿಗೂ ಕೂಡ ಇದೇ ನಿಯಮ ಪಾಲಿಸಬೇಕು ಮತ್ತು ಕೋವಿಡ್ ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕಿದೆ.
ಒಟ್ಟಾರೆ ನೋವುಗಳ ನಡುವೆ ಅದ್ದೂರಿಯಾಗಿ ಈ ಬಾರಿಯ ಹೊಸ ವರ್ಷವನ್ನ ಸ್ವಾಗತ ಮಾಡಲು ಸಿಲಿಕಾನ್ ಸಿಟಿ ಮಂದಿ ಕಾತುರದಿಂದ ಕಾಯ್ತಾ ಇದ್ರೆ, ಜನರ ಆರೋಗ್ಯ ಕಾಪಾಡಲು ಮುಂದಾಗಿರುವ ಸರ್ಕಾರ ಮಾತ್ರ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿ ನಿರಾಸೆ ಉಂಟು ಮಾಡಿದೆ.