ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿ ಕೊರೊನಾ ಸೋಂಕಿಗೆ ತುತ್ತಾದ ಮೂತ್ರಪಿಂಡ ತಜ್ಞ ಡಾ. ಬಾಲಾಜಿ ಪ್ರಸಾದ್ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದೆ.
100ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ವಾರಿಯರ್ಗೆ ಕೋವಿಡ್: ವೈದ್ಯನ ನೆರವಿಗೆ ಮುಂದಾದ ಸರ್ಕಾರ - Dr. Balaji Prasad, a renal specialist
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಗುಲಿದ ವೈದ್ಯನ ನೆರವಿಗೆ ಸರ್ಕಾರ ಧಾವಿಸಿದೆ. ಸೋಂಕಿತ ಕೊರೊನಾ ವಾರಿಯರ್ ಚಿಕಿತ್ಸೆಗಾಗಿ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆಗೆ ಸರ್ಕಾರ ಮುಂದಾಗಿದೆ. ನೂರಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಕೊರೊನಾ ವಾರಿಯರ್ ಡಾ. ಬಾಲಾಜಿ ಪ್ರಸಾದ್ ಸದ್ಯ ಸೋಂಕು ತಗುಲಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾ.ಬಾಲಾಜಿ ಪ್ರಸಾದ್ 100 ಕ್ಕೂ ಅಧಿಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊರೊನಾ ವಾರಿಯರ್ ಹೀರೋ ಎಂದು ಹೆಸರು ಪಡೆದಿದ್ದರು. ಅವರ ಸೇವೆಯ ಕುರಿತು ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಆದರೆ ನಂತರ ಅವರಿಗೂ ಕೊರೊನಾ ಸೋಂಕು ತಗಲಿದ್ದು, ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ ಬಾಲಾಜಿ 37 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿದೆ. ವೈದ್ಯನ ಶ್ವಾಸಕೋಶಕ್ಕೆ ಹಾನಿಯಾಗಿರುವುದರಿಂದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದಿದ್ದಾರೆ.
ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಸಹಾಯ ಮಾಡಬೇಕು ಎಂದು ಕೋರಲಾಗಿತ್ತು. ಸಚಿವ ಡಾ. ಕೆ.ಸುಧಾಕರ್ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ತೀರ್ಮಾನ ಕೈಗೊಳ್ಳಲು ಪ್ರಯತ್ನ ಮಾಡಿದ್ದರು. ಸಚಿವರ ಪ್ರಯತ್ನದ ಫಲವಾಗಿ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ಸಿಎಂಆರ್‍ಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.