ಬೆಂಗಳೂರು:ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹಾಗೂ ಯೋಜನೆ ಕುರಿತು ತಾವು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ಲಭಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕರ್ನಾಟಕದ ಎಲ್ಲ ಅರ್ಹ ಜನರಿಗೆ ಲಸಿಕೆ ನೀಡಲು ಅವರು ಹೇಗೆ ಯೋಜಿಸಿದ್ದಾರೆ ಎಂಬುದರ ಕುರಿತು ನೀಲನಕ್ಷೆ ಮತ್ತು ಟೈಮ್‌ಲೈನ್ ನೀಡುವಂತೆ ನಾನು ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸಚಿವ ಡಾ. ಸುಧಾಕರ್ ಅವರನ್ನು ಕೇಳಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಲಸಿಕೆ ಪಡೆಯುವ ವಿಚಾರವಾಗಿ ಹೆಸರು ನೋಂದಣಿ ಮತ್ತು ಮುಂಗಡ ಕಾಯ್ದಿರಿಸುವಿಕೆಗೆ ತೊಡಕಾಗಿದೆ. ಒಟಿಪಿಯಲ್ಲಿ ಸಮಸ್ಯೆಗಳಿವೆ ಮತ್ತು ಲಭ್ಯವಿರುವ ಕೆಲವು ಸ್ಲಾಟ್‌ಗಳನ್ನು ಸೆಕೆಂಡುಗಳಲ್ಲಿ ಬುಕ್ ಮಾಡಲಾಗುತ್ತದೆ.
ಕೋವಿನ್ ತಂತ್ರಾಂಶದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್‌ಗಳ ಬಳಕೆಯ ಅನುಭವ ಇಲ್ಲದವರು ಏನು ಮಾಡಬೇಕು? ಲಸಿಕೆ ಪ್ರಕ್ರಿಯೆಯಿಂದ ಅವರನ್ನು ಉದ್ದೇಶಪೂರ್ವಕವಾಗಿ ದೂರವಿಡಲಾಗುತ್ತಿದೆಯೇ? ಅಲ್ಲದೆ, 45 ವರ್ಷ ಮೇಲ್ಪಟ್ಟವರು ಸುಮಾರು 65 ಲಕ್ಷ ದಷ್ಟು ಮಂದಿ ಎರಡನೇ ಹಂತದ ಲಸಿಕೆ ಪಡೆಯುವುದಕ್ಕೆ ಕಾಯುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದ ಬಳಿ ಇವರಿಗೆ ಲಸಿಕೆ ನೀಡುವ ಸಂಗ್ರಹ ಇಲ್ಲವಾಗಿದೆ. ಇದಕ್ಕೆ ಪರಿಹಾರವೇನು ಎಂದು ಕೇಳಿದರು ಸರ್ಕಾರದಿಂದ ಉತ್ತರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಜನರ ಜೀವನವನ್ನು ಅಪಾಯಕ್ಕೆ ದೂಡುತ್ತಿದೆ. ವಿಶೇಷವಾಗಿ ನಮ್ಮ ಹಿರಿಯ ನಾಗರಿಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಲಸಿಕೆ ಹಾಕುವ ಕ್ರಿಯಾ ಯೋಜನೆಯನ್ನು ಪಾರದರ್ಶಕವಾಗಿ ರೂಪಿಸಲು ಮತ್ತು ಅದನ್ನು ಕರ್ನಾಟಕದ ಜನರೊಂದಿಗೆ ಹಂಚಿಕೊಳ್ಳಲು ನಾನು ಮತ್ತೆ ಅವರಿಗೆ ಮನವಿ ಮಾಡುತ್ತೇನೆ. ಇದು ಜನರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಲಸಿಕೆ ಹಿಂಜರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.