ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಉತ್ತಮವಾಗಿರುವುದರಿಂದ ಈ ವರ್ಷ ಬಿತ್ತನೆ ಕಾರ್ಯ ಫಲಪ್ರದವಾಗಿದೆ.
ಕೋವಿಡ್ ನಿಂದಾಗಿ ನಗರ ಪ್ರದೇಶಗಳಲ್ಲಿದ್ದ ಜನರು ತಮ್ಮ-ತಮ್ಮ ಹಳ್ಳಿಗಳಿಗೆ ವಾಪಸ್ ಆಗಿರುವುದರಿಂದ ಬಿತ್ತನೆ ಕಾರ್ಯ ಮತ್ತಷ್ಟು ಚುರುಕುಗೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಈ ವರ್ಷ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆಯು ಬಿತ್ತನೆಯ ಗುರಿ ಹೊಂದಿದ್ದು, ಇದರಲ್ಲಿ ಅಂದಾಜು ಶೇ. 65ರಷ್ಟು ಬಿತ್ತನೆ ಚಟುವಟಿಕೆ ಮುಗಿದಿದೆ.
ಕಾರಣವೇನು?:ಕೋವಿಡ್ ಲಾಕ್ ಡೌನ್ ಹಿನ್ನೆಲೆ ಸಾಕಷ್ಟು ವಲಸೆ ಕಾರ್ಮಿಕರು ತಮ್ಮ ಗ್ರಾಮಗಳ ಕಡೆ ಮುಖ ಮಾಡಿದರು. ಜೊತೆಗೆ ಬಹುತೇಕ ಮಂದಿ ಉದ್ಯೋಗ ಕಳೆದುಕೊಂಡರು. ಹಾಗಾಗಿ, ಹಳ್ಳಿಗಳಿಗೆ ತೆರಳಿದ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಇದೇ ವೇಳೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರಿಗೆ ವರದಾನವಾಗಿದೆ. ಹಾಗಾಗಿ, ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ತೋಟಗಾರಿಕೆ ಬೆಳೆಗಳು ಸೇರಿದಂತೆ ಇತರೆ ಸಾಮಾನ್ಯ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ. ತೆಂಗು, ಮಾವು, ಚೇಪೆ, ಬಾಳೆ, ಸಪೋಟ ಬೆಳೆಯಲು ಅಣಿಯಾಗುತ್ತಿದ್ದಾರೆ. ಪ್ರತಿ ವರ್ಷ ಜುಲೈ ಅಂತ್ಯದ ವೇಳೆಗೆ ಶೇ. 60 ರಷ್ಟು ಬಿತ್ತನೆಯಾಗಬೇಕು. ಈ ವರ್ಷ ಶೇ. 65 ರಷ್ಟು ಬಿತ್ತನೆಯಾಗಿದ್ದು, ಮುಂಬರುವ ಎರಡು ತಿಂಗಳಲ್ಲಿ ಉತ್ತಮ ಮಳೆಯಾದರೆ ಉಳಿದ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಕೃಷಿಯತ್ತ ಯುವಕರು: ಕೊರೊನಾ ಎಫೆಕ್ಟ್ ನಿಂದಾಗಿ ಬಹುತೇಕ ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ನೀರಾವರಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿದ್ದು, ಯುವಕರು ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಕೆಗೆ ಮುಂದಾಗಿರುವುದು ವಿಶೇಷವಾಗಿದೆ.