ಕರ್ನಾಟಕ

karnataka

By

Published : Jun 28, 2022, 4:27 PM IST

ETV Bharat / state

ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಬರೆ

ಇಂಧನ ವೆಚ್ಚ ಹೊಂದಾಣಿಕೆ (ಎಫ್​​ಎಸಿ) ಶುಲ್ಕವಾಗಿ ಪ್ರತಿ 100 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 19ರಿಂದ 31 ರೂ.ವರೆಗೆ ಪಾವತಿಸಬೇಕಾಗಿದೆ.

fuel-cost-adjustment-charges-hike-from-july-1st-in-karnataka
ರಾಜ್ಯದ ಜನರಿಗೆ ಮತ್ತೊಂದು ವಿದ್ಯತ್ ದರ ಏರಿಕೆಯ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕದ ಬರೆ

ಬೆಂಗಳೂರು: ಮುಂದಿನ‌ ತಿಂಗಳಿಂದ ರಾಜ್ಯದ ಗ್ರಾಹಕರಿಗೆ ಮತ್ತೆ ವಿದ್ಯುತ್ ಬೆಲೆ ಏರಿಕೆಯ ಬರೆ ಬೀಳಲಿದೆ. ಇದೇ ಏಪ್ರಿಲ್​ನಿಂದ ವಾರ್ಷಿಕ ವಿದ್ಯುತ್ ದರ ಏರಿಕೆಯಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯದ ಜನರಿಗೆ ಇದೀಗ ಜುಲೈ ತಿಂಗಳಿಂದ ಮತ್ತೆ ವಿದ್ಯುತ್ ದರ ಏರಿಕೆ ಮೂಲಕ ಜೇಬಿಗೆ ಕತ್ತರಿ ಬೀಳಲಿದೆ.

ಇದೇ ಜೂನ್ 20ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​ಸಿ) ಈ ಸಂಬಂಧ ಆದೇಶ ಹೊರಡಿಸಿದ್ದು, ಎಸ್ಕಾಂಗಳಿಗೆ ಇಂಧನ ವೆಚ್ಚ ಹೊಂದಾಣಿಕೆ (ಎಫ್​​ಎಸಿ) ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ. ಅದರಂತೆ ಗ್ರಾಹಕರಿಂದ ಎಸ್ಕಾಂಗಳಿಗೆ ಜುಲೈ 1ರಿಂದ ಡಿಸೆಂಬರ್ 31ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ ವಸೂಲಿ ಮಾಡಲು ಅವಕಾಶ ನೀಡಲಾಗಿದೆ.

ಕೆಇಆರ್​ಸಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಬೆಸ್ಕಾಂಗೆ ಪ್ರತಿ ತಿಂಗಳು ಪ್ರತಿ ಯೂನಿಟ್​​ಗೆ 31 ಪೈಸೆ, ಮೆಸ್ಕಾಂಗೆ 21 ಪೈಸೆ, ಚೆಸ್ಕಾಂಗೆ 19 ಪೈಸೆ, ಹೆಸ್ಕಾಂಗೆ 27 ಪೈಸೆ ಹಾಗೂ ಜೆಸ್ಕಾಂಗೆ 26 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 19ರಿಂದ 31 ರೂ.ವರೆಗೆ ಪಾವತಿಸಬೇಕಾಗಿದೆ.

ಏನಿದು ಹೊಂದಾಣಿಕೆ ಶುಲ್ಕ?:ಇಂಧನ ವೆಚ್ಚ ಹೊಂದಾಣಿಕೆ (ಎಫ್​​ಎಸಿ) ಶುಲ್ಕ ಎಂದರೆ ಇಂಧನ ಖರೀದಿ ವೆಚ್ಚ ಹಾಗೂ ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಗಮಗಳು ವಿಧಿಸುವ ದರ. ಇಂಧನ ವೆಚ್ಚ ಹೆಚ್ಚಾದಾಗ ಅದನ್ನು ಎಸ್ಕಾಂಗಳು ಗ್ರಾಹಕರಿಂದ ವಸೂಲಿ ಮಾಡುವ ನಿಟ್ಟಿನಲ್ಲಿ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿತ್ತು. ವಿದ್ಯುತ್ ಖರೀದಿ ವೆಚ್ಚದ ಆಧಾರದಲ್ಲಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ನಿಗದಿ ಮಾಡಿಕೊಡಲಾಗುತ್ತದೆ.

ಗ್ರಾಹಕರಿಗೆ ವಿಧಿಸಬೇಕಾದ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕದ ಪ್ರಸ್ತಾವನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್​ಸಿಗೆ ಎಸ್ಕಾಂಗಳು ಸಲ್ಲಿಸುತ್ತವೆ. ಕೆಇಆರ್​ಸಿ ಸಭೆ ಸೇರಿ ಪ್ರಸ್ತಾವನೆಯನ್ನು ವಿಸ್ತೃತವಾಗಿ ರ್ಚಚಿಸಿದ ಬಳಿಕ ಪ್ರತಿ ಯೂನಿಟ್​ಗೆ ಗ್ರಾಹಕರಿಂದ ಎಸ್ಕಾಂಗಳು ಸಂಗ್ರಹಿಸಬೇಕಾದ ಶುಲ್ಕ ನಿಗದಿಪಡಿಸುತ್ತದೆ.

2021–22ನೇ ಸಾಲಿನ ಕೊನೆಯ ಎರಡು ತ್ರೈಮಾಸಿಕದಲ್ಲಿ ಕಲ್ಲಿದ್ದಲು ದರ ಗಣನೀಯ ಹೆಚ್ಚಳವಾಗಿತ್ತು. ಹೀಗಾಗಿ, ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕೆಇಆರ್‌ಸಿಗೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು. ಅದರಂತೆ ಬೆಸ್ಕಾಂ 55.28 ರೂ., ಮೆಸ್ಕಾಂ 38.98 ರೂ., ಸೆಸ್ಕ್‌ 40.47 ರೂ., ಹೆಸ್ಕಾಂ 49.54, ಜೆಸ್ಕಾಂ 39.36 ರೂ. ವಿಧಿಸುವಂತೆ ಪ್ರಸ್ತಾವದಲ್ಲಿ ಮನವಿ ಸಲ್ಲಿಸಿದ್ದವು.

ನಾಲ್ಕನೇ ತ್ರೈಮಾಸಿಕದ ಎಫ್​ಎಸಿಯನ್ನು ಜುಲೈ -ಸೆಪ್ಟೆಂಬರ್​ನ ಮೂರು ತಿಂಗಳ ಅವಧಿಯಲ್ಲಿ ವಸೂಲಿ ಮಾಡಬೇಕಾಗಿತ್ತು. ಆದರೆ ಏಪ್ರಿಲ್​ನಲ್ಲಿ ಸರಾಸರಿ 35 ಪೈಸೆ ವಿದ್ಯುತ್ ದರ ಏರಿಕೆ ಮಾಡಿದ ಬೆನ್ನಲ್ಲೇ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಮೂರು ತಿಂಗಳ ಅವಧಿಯಲ್ಲಿ ವಸೂಲಿ ಮಾಡಿದರೆ ಗ್ರಾಹಕರಿಗೆ ಭಾರಿ ಹೊರೆ ಬೀಳಲಿದೆ ಎಂಬ ಕಾರಣಕ್ಕೆ ಈ ಶುಲ್ಕವನ್ನು ಆರು ತಿಂಗಳ ಅವಧಿಯಲ್ಲಿ ವಸೂಲಿ ಮಾಡಲು ಕೆಇಆರ್​ಸಿ ಅವಕಾಶ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಕ್ರಿಪ್ಟೊಗೆ ಟಿಡಿಎಸ್​, ಗಿಫ್ಟ್​ಗೂ ಟ್ಯಾಕ್ಸ್​.. ಜು.1 ರಿಂದ ಇನ್ನೂ ಏನೆಲ್ಲ ಬದಲಾವಣೆ ?

ABOUT THE AUTHOR

...view details