ಬೆಂಗಳೂರು: ನೂತನ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಅಂಶ ಇರುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೂತನ ಮರಳು ನೀತಿಯಲ್ಲಿ ಉಚಿತವಾಗಿ ಮರಳು ನೀಡುವ ಪ್ರಸ್ತಾಪ ಕೈ ಬಿಡಲಾಗುತ್ತದೆ. ಈ ಬಗ್ಗೆ ನಿಜ ಹೇಳುತ್ತೇನೆ. ಹಿಂದಿನ ಸಚಿವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ 10 ದಶಲಕ್ಷ ಟನ್ ಮರಳು ಕೊರತೆ ಇದೆ. 45 ದಶಲಕ್ಷ ಟನ್ ನಮಗೆ ಮರಳು ಅವಶ್ಯಕತೆ ಇದ್ದರೆ ಕೇವಲ 35 ದಶಲಕ್ಷ ಟನ್ ಮಾತ್ರ ಪೂರೈಕೆ ಆಗ್ತಿದೆ. ಎಂ-ಸ್ಯಾಂಡ್ ಆದ್ರೂ ಹೆಚ್ಚಳ ಮಾಡಬೇಕು ಅಥವಾ ಬೇರೆ ಏನಾದ್ರೂ ಪರಿಹಾರ ಹುಡುಕಬೇಕು. ಹೊಸ ಮರಳು ನೀತಿಗೆ ಇನ್ನೂ ಕ್ಯಾಬಿನೆಟ್ ಅಪ್ರೂವ್ ಆಗಿಲ್ಲ. ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ. ಮರಳು ನೀತಿ ಸರಳವಾಗಿ ಮಾಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಬಡವರು ಹಾಗೂ ಜನಸಾಮಾನ್ಯರು ಮನೆ ಕಟ್ಟಲು ಅನುಕೂಲವಾಗುವಂತೆ ಉಚಿತ ಮರಳು ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರ ರದ್ದು ವಿಚಾರವಾಗಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರ ಒನ್ ಸ್ಟಾಪ್ ಸೆಂಟರ್ ಪ್ರಾರಂಭಿಸಿವೆ. ಅದೇ ಸ್ಥಳಗಳಲ್ಲಿ ರಾಜ್ಯದ ಸಾಂತ್ವನ ಕೇಂದ್ರಗಳಿದ್ದವು. ಒಂದೇ ಕಡೆ ಎರಡು ಕೇಂದ್ರಗಳಿವೆ ಎಂಬ ಕಾರಣಕ್ಕೆ ಸಾಂತ್ವನ ಕೇಂದ್ರಗಳನ್ನು ರದ್ದು ಪಡಿಸಲಾಗಿದೆ. ಎರಡು ಕೇಂದ್ರಗಳ ಸೇವೆ ಒಂದೇ ಆಗಿದೆ. ಎರಡು ಕಡೆ ಇರುವ ಕಡೆ ಮಾತ್ರ ತೆಗೆಯಲಾಗಿದೆ. ತಾಲೂಕು ಮಟ್ಟದಲ್ಲಿ ಸಾಂತ್ವನ ಕೇಂದ್ರಗಳಿವೆ ಎಂದು ಸ್ಪಷ್ಟನೆ ನೀಡಿದರು.