ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳ ಹೆಸರಿನಲ್ಲಿ ಶೈಕ್ಷಣಿಕ ಸಾಲ ಪಡೆದು ವಂಚನೆ: ಬೆಂಗಳೂರಿನಲ್ಲಿ ಆರೋಪಿ ಸೆರೆ

ಆರೋಪಿಯ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದು, ತನಿಖೆಯಲ್ಲಿ 18 ಕೋಟಿ ರೂ ವಂಚನೆ ಬೆಳಕಿಗೆ ಬಂದಿದೆ.

fraud accused Shrinivasulu
ವಂಚನೆ ಆರೋಪಿ ಶ್ರೀನಿವಾಸುಲು

By

Published : Jun 1, 2023, 12:43 PM IST

Updated : Jun 1, 2023, 3:36 PM IST

ಬೆಂಗಳೂರು: ಫ್ರೀ ಕೋರ್ಸ್ ಹೆಸರಿನಲ್ಲಿ ವಿದ್ಯಾರ್ಥಿಗಳ ದಾಖಲೆಗಳನ್ನು ಪಡೆದು ಬ್ಯಾಂಕಿನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಶ್ರೀನಿವಾಸುಲು ಬಂಧಿತ ವ್ಯಕ್ತಿ. ಡೇಟಾ ಸೈನ್ಸ್ ಆನ್‌ಲೈನ್ ಕೋರ್ಸ್ ಉಚಿತವಾಗಿ ನೀಡುವುದಾಗಿ ಪ್ರಕಟಿಸಿದ್ದ ಆರೋಪಿ ಜಯನಗರದಲ್ಲಿ ಗೀಕ್ ಲರ್ನ್ ಎಜುಕೇಶನ್ ಇನ್​ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿ ಸೆಂಟರ್ ತೆರೆದಿದ್ದ. ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೋರ್ಸ್​ಗೆ ಪ್ರವೇಶ ಪಡೆದಿದ್ದರು.

ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಬಳಿ ಅವರ ದಾಖಲಾತಿಗಳನ್ನು ಪಡೆದುಕೊಳ್ಳತ್ತಿದ್ದ ಆರೋಪಿ, ನಂತರ ಅದೇ ದಾಖಲಾತಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕಿನಿಂದ ಎಜುಕೇಶನ್ ಲೋನ್ ಪಡೆದುಕೊಳ್ಳುತ್ತಿದ್ದನು. ಲೋನ್ ಹಣವನ್ನು ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳುತ್ತಿದ್ದನು. ಬಳಿಕ ಎಲ್ಲ ಹಣವನ್ನು ತನ್ನ ಖಾತೆಗೆ ಪಡೆದು, ಲೋನ್ ಮರುಪಾವತಿ ಮಾಡದೇ ವಂಚಿಸುತ್ತಿದ್ದನು. ಆರೋಪಿಯ ವಂಚನೆಯ ವಿರುದ್ಧ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಜಯನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಯು ಸುಮಾರು 18 ಕೋಟಿ ರೂ ವಂಚಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಆರೋಪಿ ಇದೇ ರೀತಿಯಲ್ಲಿ ವಂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ವಂಚನೆ:ಇನ್ನುಕಳೆದ ತಿಂಗಳು ಬೆಂಗಳೂರಿನ ಪೊಲೀಸರು ಆಂಧ್ರಪ್ರದೇಶದ ಮೂವರನ್ನು ವಂಚನೆ ಆರೋಪದಲ್ಲಿ ಬಂಧಿಸಿದ್ದರು. ಲೇಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ದಾಳಿ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಸಿದ್ದಾಪುರದ ಪೊಲೀಸರು ಬಂಧಿಸಿದ್ದರು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕಿ ಆಶಾ ಸುರೇಶ್​ ನೀಡಿದ್ದ ದೂರಿನ ಆಧಾರದಲ್ಲಿ ಆಂಧ್ರಪ್ರದೇಶದ ಕಡಪ ಮೂಲದ ನಾಗೇಶ್ವರ ರೆಡ್ಡಿ, ಬುಚ್ಚುಪಲ್ಲಿ ವಿನೀತ್​ ಕುಮಾರ್​ ಹಾಗೂ ಶಿವಕುಮಾರ್​ ರೆಡ್ಡಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಗಳು ಮಹಿಳಾ ಅಧಿಕಾರಿಗೆ ಕರೆ ಮಾಡಿ ತಮ್ಮ ಹೆಸರು ಹೇಳಿ, ತಾವು ಲೋಕಾಯುಕ್ತ ಅಧಿಕಾರಿಗಳು, ನಾವು ನಿಮ್ಮ ಮನೆ ಮೇಲ ದಾಳಿ ಮಾಡುತ್ತೇವೆ. ನಾವು ದಾಳಿ ಮಾಡದೇ ಇರಬೇಕಾದರೆ ಎರಡು ಲಕ್ಷ ಹಣ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಬಗ್ಗೆ ನಾವು ಎಡಿಜಿಪಿಗೆ ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಮಹಿಳಾ ಅಧಿಕಾರಿ ಬ್ಯಾಂಕ್​ ಮೂಲಕ 1 ಲಕ್ಷ ಹಣವನ್ನು ಆತನ ಖಾತೆಗೆ ಜಮೆ ಮಾಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿಯ ಫೋನ್​ ಸ್ವಿಚ್​ ಆಫ್​ ಬಂದಿದೆ. ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಹೈದರಾಬಾದ್​ಗೆ ಎಸ್ಕೇಪ್​ ಆಗುತ್ತಿದ್ದಾಗ ಆರೋಪಿಗಳನ್ನು ಬೆಂಗಳೂರು ರೈಲು ನಿಲ್ದಾಣದಲ್ಲಿ ಸೆರೆ ಹಿಡಿದಿದ್ದರು.

ಇದನ್ನೂ ಓದಿ:1.15 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಬಂಧನ

Last Updated : Jun 1, 2023, 3:36 PM IST

ABOUT THE AUTHOR

...view details