ಬೆಂಗಳೂರು:ಮಾಜಿ ಸಂಸದ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿದೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ್ ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕೂಡ ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಬಾರಿ ಮುಕ್ತವಾಗಿ ಚರ್ಚೆ ಮಾಡಿದ್ದೆವು. ಅವರ ಚಿಂತನೆ ಮತ್ತು ನಮ್ಮ ಚಿಂತನೆಯಲ್ಲಿ ಸಾಮ್ಯವಿತ್ತು. ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿದ್ದ ಅವರು ಈ ರಾಜ್ಯದ ಅಭಿವೃದ್ಧಿ, ಪರಿಶಿಷ್ಟ ಜನಾಂಗದ ಬಗ್ಗೆ ಹಾಗೂ ಚಾಮರಾಜನಗರದ ಬಗ್ಗೆ ಶ್ರೇಷ್ಠ ಕಳಕಳಿ ವ್ಯಕ್ತಪಡಿಸುತ್ತಿದ್ದರು. ಒಳ್ಳೆ ಕೆಲಸ ಮಾಡಿದ್ದರು. ಅವರಿಗೆ ಹೃದಯಾಘಾತವಾಗಿ ಸಾವು ಉಂಟಾಗಿದ್ದು ಆಘಾತ ತಂದಿದೆ. ನಂಬಲಾಗುತ್ತಿಲ್ಲ. ಅತಿ ಕ್ರಿಯಾಶೀಲರಾಗಿ ಓಡಾಡುತ್ತಿದ್ದರು ಎಂದರು.
ಬದ್ಧತೆಯುಳ್ಳ ರಾಜಕಾರಣಿ :ಸಂಸತ್ತಿನಲ್ಲಿ ಅವರು ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದರು.ಪರಿಶಿಷ್ಟ ಜನಾಂಗ, ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಬದ್ಧತೆಯುಳ್ಳ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು:ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಯಣ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಇಂದು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದರು. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಹೇಳಿದರು.
ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಭಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟ ಎಂದರು.
ಪ್ರಜಾಧ್ವನಿ ಯಾತ್ರೆ ರದ್ದು: ಇಂದು ನಡೆಯಬೇಕಿದ್ದ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇವೆ. ಈ ನಷ್ಟವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಮಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಸೇವೆ, ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತ ಸಂದರ್ಭದಲ್ಲಿ ಅವರ ಸ್ಪಂದನೆ, ಬದ್ಧತೆ ಎಲ್ಲವೂ ಇತಿಹಾಸ ಪುಟ ಸೇರಲಿದೆ ಎಂದು ತಿಳಿಸಿದರು.
ಧ್ರುವನಾರಾಯಣ್ ಗೆ 61 ವರ್ಷ ಅಷ್ಟೇ ಆಗಿತ್ತು ಪಾದರಸದಂತೆ ಕೆಲಸ ಮಾಡುತ್ತಿದ್ದವರು:ಧ್ರುವನಾರಾಯಣ್(61) ವಿಧಿವಶ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತ ಪಡಿಸಿದರು, ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಧ್ರುವನಾರಾಯನ್ಗೆ 61 ವರ್ಷ ಅಷ್ಟೇ ಆಗಿತ್ತು. ಪಾದರಸದಂತೆ ಕೆಲಸ ಮಾಡುತ್ತಿದ್ದವರು. ಅವರ ಸಾವು ನನಗೆ ಅಷ್ಟೇ ಅಲ್ಲ, ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟ. ವಿಧಿ ಆಟದ ಮುಂದೆ ನಾವ್ಯಾರು ಆಡೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.