ಬೆಂಗಳೂರು: ಮಾಜಿ ಸಂಸದ ಶಿಗ್ಗಾಂವಿಯ ಮಂಜುನಾಥ್ ಕುನ್ನೂರು, ಕೆ.ಆರ್ ಪೇಟೆ ಜೆಡಿಎಸ್ ಮುಖಂಡ ದೇವರಾಜ್ ಹಾಗೂ ಚಿಂತಾಮಣಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂ.ಸಿ ಸುಧಾಕರ್ ಅವರ 100ಕ್ಕೂ ಹೆಚ್ಚು ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜೆಡಿಎಸ್ನ 100ಕ್ಕೂ ಹೆಚ್ಚು ಮುಖಂಡರ ಜತೆ ಸುಧಾಕರ್ ಅವರನ್ನು ಬೆಂಬಲಿಸಿ ಕೈ ಹಿಡಿದರು.
2008, 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಎಂ.ಸಿ ಸುಧಾಕರ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕೆಲ ತಿಂಗಳ ಹಿಂದೆ ಇವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇಂದು ಅವರನ್ನು ಬೆಂಬಲಿಸಿ ಹಲವು ಮುಖಂಡರು ಪಕ್ಷಕ್ಕೆ ಸೇರಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಡಿ ಕೆ ಶಿಕುಮಾರ್, ಇವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವ ಮೆಚ್ಚಿ ಬಂದಿದ್ದಾರೆ. ಸುಧಾಕರ್ ಅವರು ಕಳೆದ ಸಾರಿ ನಮ್ಮಿಂದ ದೂರವಾಗಿ ಬೇರೆ ಪಕ್ಷದಿಂದ ಕಣಕ್ಕಿಳಿದಿದ್ದರು. ಈಗ ಹಿಂದಿರುಗಿದ್ದಾರೆ. ಇಂದು ಇವರನ್ನು ಬೆಂಬಲಿಸಿ ಜೆಡಿಎಸ್ನ 100 ಮುಖಂಡರು ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ಗೆ ಬಂದಿದ್ದಾರೆ. ಇವರೆಲ್ಲರೂ ಈಗಾಗಲೇ ಪಕ್ಷ ಸೇರ್ಪಡೆಯಾಗುವ ಸಂಬಂಧ ಅರ್ಜಿ ಸಲ್ಲಿಸಿದ್ದರು. ಸುಧಾಕರ್ ನಾಲ್ಕಾರು ಸಾರಿ ಭೇಟಿ ಮಾಡಿ ಪಕ್ಷ ಸೇರಲು ಹಲವು ನಾಯಕರು ಸಿದ್ಧವಿದ್ದಾರೆ. ತಾವು ಚಿಂತಾಮಣಿಗೆ ಬರಬೇಕೆಂದು ಮನವಿ ಮಾಡಿದ್ದರು. ಆದರೆ ಪ್ರಜಾಧ್ವನಿ ಯಾತ್ರೆಗೆ ಬರುತ್ತೇವೆ, ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದೆ. ಇಂದು ಸಹ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದುಪಡಿಸಿ ಇಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.
ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ದೇಶದ ಪರ ದನಿ ಎತ್ತಿದ್ದಾರೆ. ಇದಕ್ಕಾಗಿ ಅವರ ಸದಸ್ಯತ್ವ ರದ್ದುಪಡಿಸಲಾಗಿದೆ. ಇದಕ್ಕೆ ಪ್ರತಿಧ್ವನಿಯಾಗಿ ನೀವು ನಮಗೆ ಶಕ್ತಿ ತುಂಬಲು ಬಂದಿದ್ದೀರಿ. ನಿಮ್ಮನ್ನೆಲ್ಲ ಪಕ್ಷಕ್ಕೆ ಸ್ವಾಗತಿಸುತ್ತೇನೆ. ನೀವು ನಮ್ಮ ಪಕ್ಷದ ಹಳೆಯ ಮುಖಂಡರು, ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಬೇಕು. ಈಗಾಗಲೇ ಡಾ. ಎಂ.ಸಿ ಸುಧಾಕರ್ ಅವರನ್ನು ಚಿಂತಾಮಣಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಅವರ ಪರ ಕೆಲಸ ಮಾಡಬೇಕು. ಈಗಿನಿಂದಲೇ ಅವರ ಬಲ ಹೆಚ್ಚಿಸಲು ಇನ್ನಷ್ಟು ಮಂದಿಯನ್ನು ಪಕ್ಷಕ್ಕೆ ಕರೆಸಬೇಕು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಪ್ರತಿ ಮನೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.