ಕರ್ನಾಟಕ

karnataka

ETV Bharat / state

BSY ಕಡೆಗಣಿಸಿದಾಗಲೆಲ್ಲ ಬಿಜೆಪಿಗೆ ಹಾನಿ : ರೇಣುಕಾಚಾರ್ಯ... ಜೆಡಿಎಸ್​ ಮೈತ್ರಿ ವಿಚಾರ ಇನ್ನೂ ಪ್ರಿ ಮೆಚ್ಯೂರ್​​ ಎಂದ ಸೋಮಣ್ಣ! - ಲೋಕಸಭೆ ಚುನಾವಣೆ

ಮಾಜಿ ಶಾಸಕ ರೇಣುಕಾಚಾರ್ಯ ಮತ್ತೆ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

former-mla-renukacharya-slams-bjp-leaders
ಯಡಿಯೂರಪ್ಪ ಅವರನ್ನು ಕಡೆಗಣಿಸಿದಾಗಲೆಲ್ಲ ಬಿಜೆಪಿಗೆ ಹಾನಿ : ಮಾಜಿ ಶಾಸಕ ರೇಣುಕಾಚಾರ್ಯ

By ETV Bharat Karnataka Team

Published : Sep 9, 2023, 4:29 PM IST

Updated : Sep 9, 2023, 5:46 PM IST

ಬಿಜೆಪಿ, ಜೆಡಿಎಸ್​ ಮೈತ್ರಿ..ವಿ ಸೋಮಣ್ಣ ಪ್ರತಿಕ್ರಿಯೆ

ಬೆಂಗಳೂರು : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದಾಗಲೆಲ್ಲ ಬಿಜೆಪಿಗೆ ಹಾನಿ ಆಗಿದೆ. ಆದರೂ ಕೆಲವರಿಗೆ ಬುದ್ಧಿ ಬಂದಿಲ್ಲ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸ್ವಪಕ್ಷದವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಇಂದು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದರ ಬಗ್ಗೆ ಆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಬೇರೆಯವರಿಗೆ ನೀತಿ ಪಾಠ ಮಾಡುವ ಬದಲು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮತ್ತೆ ಬಿ. ಎಲ್ ಸಂತೋಷ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ನಾನು ಟಿಕೆಟ್ ಆಕಾಂಕ್ಷಿ: ನಾನು ದಾವಣಗೆರೆ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೇಳಿದ್ದೇನೆ. ಟಿಕೆಟ್ ಕೊಡದಿದ್ದರೆ ಕಾದು ನೋಡ್ತೇನೆ. ಆಪ್ತರ ಜೊತೆ ಮುಂದೇನು ಮಾಡಬೇಕೆಂದು ಚರ್ಚಿಸುತ್ತೇನೆ. ಹಾಗಂತ ಕಾಂಗ್ರೆಸ್​ನಲ್ಲಿ ಟಿಕೆಟ್ ಕೇಳಿಲ್ಲ, ಅವರೂ ನನ್ನ ಜತೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಜತೆಗಿನ ಮಾತುಕತೆ ಬಗ್ಗೆ ಯಾವುದನ್ನೂ ಬಹಿರಂಗವಾಗಿ ಹೇಳಲ್ಲ. ಅವರ ಜೊತೆಗಿನ ಮಾತುಕತೆ ಬಗ್ಗೆ ನಾನು ಬಹಿರಂಗವಾಗಿ ಮಾತಾಡಲು ಇಚ್ಛೆಪಡಲ್ಲ ಎಂದರು.

ನಿನ್ನೆ ಯಡಿಯೂರಪ್ಪ ಹೋರಾಟದ ನೇತೃತ್ವ ವಹಿಸಿದ್ದರು. ಲೋಕಸಭೆ ಚುನಾವಣೆಗೋಸ್ಕರ ಮಾತ್ರ ಯಡಿಯೂರಪ್ಪ ನಾಯಕತ್ವ ಬಯಸ್ತೀರಾ?. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ನಿರ್ಲಕ್ಷ್ಯ ಮಾಡಿದ್ರಿ, ಅದಕ್ಕೆ ರಾಜ್ಯದ ಜನ ಉತ್ತರ ಕೊಟ್ಟಿದಾರೆ. ಯಡಿಯೂರಪ್ಪ ನಾಯಕತ್ವವನ್ನು ಚುನಾವಣೆಗಾಗಿ ಬಳಕೆ ಮಾಡಬೇಡಿ. ಯಡಿಯೂರಪ್ಪ ಅವರಿಗೆ ಮತಗಳನ್ನು ಪರಿವರ್ತನೆ ಮಾಡುವ ಶಕ್ತಿ ಇದೆ. ಅವರು ಎಲ್ಲ ವರ್ಗಗಳ ನಾಯಕರು. ಚುನಾವಣೆಗೋಸ್ಕರ ತಂತ್ರಗಾರಿಕೆ ಮಾಡೋದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್​ ಮೈತ್ರಿ.. ವಿ.ಸೋಮಣ್ಣ ಪ್ರತಿಕ್ರಿಯೆ :ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವಿ. ಸೋಮಣ್ಣ, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದು ಇನ್ನೂ ಪ್ರಿ ಮೆಚ್ಯೂರ್​ನಲ್ಲಿದೆ. ಕಾಲ ಪಕ್ವವಾಗಿಲ್ಲ ಎಂದು ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಾಷ್ಟ್ರ ನಾಯಕರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯದಲ್ಲಿರುವ ಅಸ್ತಿರತೆ ಹೋಗಲಾಡಿಸಲು ರಾಷ್ಟ್ರನಾಯಕರು ಈ ತೀರ್ಮಾನ ಮಾಡುತ್ತಿರಬಹುದು ಎಂದು ಹೇಳಿದರು.

ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಲ್ಲ. ಹಲವಾರು ವಿಚಾರಗಳನ್ನು ನಾನು ರಾಷ್ಟ್ರ ನಾಯಕರಿಗೆ ತಿಳಿಸಿದ್ದೇ‌ನೆ. ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಸರಿಪಡಿಸದಿದ್ದರೂ ನನಗೆ ಯಾವುದೇ ನಷ್ಟ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್ ಸೇರುವ ವಿಚಾರದಲ್ಲಿ ಈ ಬಗ್ಗೆ ಒಂದು ಕ್ಷಣವೂ ನಾನು ಯೋಚಿಸಿಲ್ಲ ಎಂದರು.

ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಪ್ರತಿಕ್ರಿಯೆ :ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್​ಡಿಎ ಒಕ್ಕೂಟವನ್ನು ಬಲಪಡಿಸಲು ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುತ್ತಿವೆ. ರಾಜ್ಯದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದರು. ಮಲ್ಲೇಶ್ವರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬೇಕು ಎಂಬ ಚರ್ಚೆ ಆಗುತ್ತಿದೆ. ಜೆಡಿಎಸ್ ನಾಯಕರು ಈ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನೂ ಅಧಿಕೃತ ಘೋಷಣೆಯಾಗಿಲ್ಲ ಎಂದರು.

ನಮ್ಮ ನಾಯಕರಾದ ಯಡಿಯೂರಪ್ಪ ಕ್ಷೇತ್ರ ಕೇಳಿದ್ದಾರೆ ಎಂದು ಹೇಳಿದ್ದಾರೆ. ನಾವು ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರ ಕಳೆದುಕೊಂಡಿದ್ದೆವು. ಆ ಕ್ಷೇತ್ರದಲ್ಲಿ ಏನು ಮಾಡಬಹುದು. ಒಟ್ಟಾಗಿ,ಒಗ್ಗಟ್ಟಾಗಿ ಕೆಲಸ ಮಾಡಬಹುದು. ಅಧಿಕೃತ ಘೋಷಣೆಯಾದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಅಪ್ರಸ್ತುತ ಪಕ್ಷ. ರಾಜ್ಯದಲ್ಲಿ ಯಾವ ರೀತಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಣೆ ಮಾಡಲ್ಲ. 100 ದಿನಗಳಲ್ಲಿ ನೂರು ಲೋಪಗಳಿವೆ. ಕುಡಿವ ನೀರಿಗೆ ಸಮಸ್ಯೆ ತಂದಿಟ್ಟಿದ್ದಾರೆ. ಭ್ರಷ್ಟಾಚಾರ ತಾಂಡವವಾಡಿದೆ. ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮೈತ್ರಿಗೆ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಶಕ್ತಿಯುತವಾಗಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೆ ಕಳೆದುಕೊಂಡಿದೆ. ಶಿವಸೇನಾ, ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ಬಿಡಲಿಲ್ಲ. ಕಾಂಗ್ರೆಸ್ ಎಲ್ಲಿ ಬೇಕಾದ್ರೂ ಹೋಗಿ ಕಾಡಿ ಬೇಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿಯಿದೆ ಎಂದು ಟೀಕಿಸಿದರು.

G20 ಸಭೆಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ವಿಶ್ವಮಟ್ಟದ ನಾಯಕರು ಬಂದಾಗ ಒಂದೇ ದೇಶ, ಒಂದೇ ಭೂಮಿ ಎಂದು ಮಾತನಾಡಬೇಕಿತ್ತು. ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ವಿಚಾರ ಅಲ್ಲ. ಸಾರ್ವಜನಿಕರ ಪ್ರತಿನಿಧಿಯಾಗಿ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳುವ ಕೆಲಸ ಮಾಡಬೇಕು. ವೈಯಕ್ತಿಕ ಪ್ರತಿಷ್ಠೆ ತೋರಿಸಿ ರಾಜಕೀಯ ಬೆರೆಸಿ ಇಂತಹ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು?: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅದು ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕು. ಈ ಕಾರಣಕ್ಕೆ ಬಿಜೆಪಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮತ್ತು ಹೋರಾಟ ಮಾಡುತ್ತಿದೆ. ಮೈತ್ರಿ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಕ್ಷೇತ್ರ ಹಂಚಿಕೆ ವಿಚಾರ ಹೈ ಕಮಾಂಡ್ ಅಂತಿಮ ಮಾಡ್ತಾರೆ ಎಂದರು.

ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ಮಾತನಾಡಲ್ಲ. ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್​​ನ ನಿಷ್ಠಾವಂತರು. ಅವರು ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಸಂಘರ್ಷ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದ ಶ್ರೀನಿವಾಸ ಪೂಜಾರಿ, ಬಿಜೆಪಿಯಿಂದ ಕೆಲವರು ಬರ್ತಾರೆ ಎಂಬ ಯೋಚನೆಯನ್ನು ಕಾಂಗ್ರೆಸ್ ಮಾಡ್ತಿದೆ. ಆದರೆ ಬಿಜೆಪಿಯಿಂದ ಯಾರೂ ಕಾಂಗ್ರೆಸ್​​ಗೆ ಹೋಗಲ್ಲ. ಪಕ್ಷ ಬಲಪಡಿಸವ ಆಸೆಯಲ್ಲಿ ಡಿ.ಕೆ.ಶಿವಕುಮಾರ್ ಅಂತಹ ಮಾತನ್ನು ಹೇಳ್ತಿದ್ದಾರೆ. ಆದರೆ ಯಾರೂ ಸಹ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಹಿಂದೆಯೂ ತಲೆಕೆಡಿಸಿಕೊಂಡಿಲ್ಲ, ಮುಂದೆಯೂ ತಲೆಕೆಡಿಸಿಕೊಳ್ಳಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Last Updated : Sep 9, 2023, 5:46 PM IST

ABOUT THE AUTHOR

...view details