ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿರುವ ತನಿಖೆಯನ್ನು ಅನುಮೋದಿಸಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಎಸ್‌ಐಟಿ ರಚನೆಯ ಸಿಂಧ್ವತ್ವ ಪ್ರಶ್ನಿಸಿ ಸಂತ್ರಸ್ತೆ ಮತ್ತು ವಕೀಲೆ ಗೀತಾ ಮಿಶ್ರಾ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠಕ್ಕೆ ಎಸ್‌ಐಟಿ ಪರ ವಕೀಲ ಪಿ. ಪ್ರಸನ್ನಕುಮಾರ್ ಈ ಮಾಹಿತಿ ನೀಡಿದರು.
ಎಸ್‌ಐಟಿ ತನಿಖಾ ವರದಿಗೆ ಸೌಮೇಂದು ಮುಖರ್ಜಿ ಅನುಮೋದನೆ ನೀಡಿದ್ದಾರೆ. ವರದಿಗೆ ಒಪ್ಪಿಗೆ ನೀಡಿ 2021ರ ನ.26ರಂದು 6 ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತನಿಖಾ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ಒಪ್ಪಿಕೊಂಡಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲಿ. ವಿಚಾರಣಾ ನ್ಯಾಯಾಲಯ ಮುಂದಿನ ಪ್ರಕ್ರಿಯೆಯನ್ನು ನಡೆಸಲಿ ಎಂದಿತು.
ಇದಕ್ಕೆ ಒಪ್ಪದ ಸಂತ್ರಸ್ತೆ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಎಸ್ಐಟಿ ರಚನೆಯೇ ಕಾನೂನು ಬಾಹಿರ ಎಂದರು. ಎಸ್‌ಐಟಿ ಪರ ವಕೀಲರು ವಿಚಾರಣಾ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಕೋರಿಕೆ ಪರಿಗಣಿಸಿದ ಪೀಠ, ಎಸ್‌ಐಟಿ ಮುಖ್ಯಸ್ಥರು ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ನೀಡಿರುವ ನಿರ್ಬಂಧ ತೆರವುಗೊಳಿಸಲು ಕೋರಿ ಅರ್ಜಿ ಸಲ್ಲಿಸಲಿ. ಅದನ್ನು ಪರಿಶೀಲಿಸಲಾಗುವುದು ಹಾಗೂ ಎಲ್ಲರ ವಾದ ಆಲಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇಂದಿರಾ ಜೈಸಿಂಗ್ ವಾದ :ವಿಚಾರಣಾ ನ್ಯಾಯಾಲಯಕ್ಕೆ ಎಸ್ಐಟಿ ತನಿಖಾ ವರದಿ ಸಲ್ಲಿಸಲು ಅನುಮತಿ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ತನಿಖಾಧಿಕಾರಿಗಳು ಸಿಆರ್‌ಪಿಸಿ ನಿಯಮಗಳ ಪ್ರಕಾರ ತನಿಖೆ ನಡೆಸಿಲ್ಲ.
6 ತಿಂಗಳ ಹಿಂದೆ ಎಫ್‌ಐಆರ್ ದಾಖಲಿಸಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಇದೆಂಥಾ ತನಿಖೆ? ಹಿಂದಿನ ಗೃಹ ಸಚಿವರ ಸೂಚನೆಯಂತೆ ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ರಚಿಸುವ ಅಧಿಕಾರ ಗೃಹ ಸಚಿವರಿಗೆ ಇದೆಯೇ ಎಂಬುದು ಮೊದಲ ಪ್ರಶ್ನೆಯಾಗಿದೆ ಎಂದರು.
ಪೀಠ ಪ್ರತಿಕ್ರಿಯಿಸಿ, ತನಿಖೆ ಪೂರ್ಣಗೊಂಡಿರುವುದರಿಂದ ಎಸ್‌ಐಟಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿ ಮತ್ತು ದೂರುದಾರರು ವರದಿಯನ್ನು ಪ್ರಶ್ನಿಸಬಹುದು. ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಬಾಕಿ ಉಳಿಸಿಕೊಂಡು ವಿಚಾರಣೆಯ ಮೇಲೆ ನಿಗಾ ಇಡುತ್ತೇವೆ ಎಂದು ಭರವಸೆ ನೀಡಿತು.
ಇದಕ್ಕೆ ಒಪ್ಪದ ಇಂದಿರಾ ಜೈಸಿಂಗ್, ಎಸ್‌ಐಟಿ ರಚನೆಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಮುಖ್ಯವಾಗಿ ನ್ಯಾಯಾಲಯವು ಎಸ್‌ಐಟಿಯನ್ನು ರಚಿಸಿಲ್ಲ. ಹಾಗಾಗಿ, ಎಸ್‌ಐಟಿಯ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧಾರವಾಗುವವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಬಾರದು.
ಒಂದೊಮ್ಮೆ ನ್ಯಾಯಾಲಯ ಎಸ್‌ಐಟಿ ತನಿಖೆಯು ಕಾನೂನುಬದ್ಧವಾಗಿ ನಡೆದಿದೆ ಎಂದು ನಿರ್ಧರಿಸಿದರೆ ಆಗ ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಹಲವು ವರ್ಷಗಳಿಂದ ನ್ಯಾಯಾಲಯಗಳು ಎಸ್‌ಐಟಿ ರಚಿಸುತ್ತಿವೆ. ಆದರೆ, ಇಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ರಕ್ಷಿಸಲು ಎಸ್‌ಐಟಿ ರಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ನಮ್ಮ ಮುಂದೆ ಎಲ್ಲರೂ ಒಂದೇ. ಎಲ್ಲರೂ ಸಮಾನರೇ.. ಸಚಿವನಾದರೂ ಅಷ್ಟೇ.. ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎಂದರು.