ಬೆಂಗಳೂರು: ಕಾಂಗ್ರೆಸ್ನವರಿಗೆ ಎನ್ಇಪಿ ಅಂದ್ರೆ ನಾಗಪುರ ಶಿಕ್ಷಣ ಪಾಲಿಸಿ ಎಂದಾದರೆ, ನಮಗೆ ಅವರ ಎಸ್ಇಪಿ ಸೋನಿಯಾ ಎಜುಕೇಷನ್ ಪಾಲಿಸಿಯಂತೆ ಕಾಣುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿಂದು ಮೇಲ್ಮನೆ ಸದಸ್ಯರ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿರುವ ಎಸ್ಇಪಿ ಅಂದ್ರೆ ಸೋನಿಯಾ ಎಜುಕೇಷನ್ ಪಾಲಿಸಿ ಅಥವಾ ಸಿದ್ದರಾಮಯ್ಯ ಎಜುಕೇಷನ್ ಅಥವಾ ಶಿವಕುಮಾರ್ ಎಜುಕೇಷನ್ ಪಾಲಿಸಿಯನ್ನು ಮಕ್ಕಳ ಮೇಲೆ ಹೇರಲು ಹೊರಟಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿ (ಎನ್‍ಇಪಿ) ಬದಲಿಸುವ ಮಾತನಾಡಿದ್ದಾರೆ. ಆದರೆ, ಅದರಲ್ಲಿರುವ ಲೋಪದೋಷಗಳಿದ್ದರೆ ಅವುಗಳನ್ನು ಬದಲಿಸುವ ಮಾತನಾಡಿಲ್ಲ" ಎಂದರು.
"ಇವತ್ತಿನ ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅವರಲ್ಲಿ ಯಾರು ಶಿಕ್ಷಣ ಸಚಿವರು?. ಸರ್ಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ" ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರ ಸರ್ಕಾರ ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನೂ ಸೇರಿಸುವ ಪ್ರಯತ್ನ ಮಾಡಿದ್ದರು. ಗ್ರಾಮಸಭೆಗಳಲ್ಲೂ ಇದನ್ನು ಇಡಲಾಗಿತ್ತು. ರಾಜಕೀಯ ದೃಷ್ಟಿ ಮತ್ತು ವಿರೋಧಕ್ಕಾಗಿಯೇ ವಿರೋಧ ಮಾಡುತ್ತಿದ್ದಾರೆ" ಎಂದು ಕಿಡಿ ಕಾರಿದರು.
ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿ: "ಕರ್ನಾಟಕದ ಭವಿಷ್ಯ ಹಾಗೂ ಇಲ್ಲಿನ ಯುವಜನರ ದೃಷ್ಟಿಯಿಂದ ಇದು ಕೆಟ್ಟ ನಿರ್ಣಯವಾಗಲಿದೆ. ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ. ಸಿದ್ದರಾಮಯ್ಯನವರ ಮೊಮ್ಮಗ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ಓದುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಸಿಬಿಎಸ್‍ಇ, ಐಸಿಎಸ್‍ಇ ಶಿಕ್ಷಣದಲ್ಲಿ ಓದಿಸುತ್ತಿದ್ದಾರೆ. ನಮ್ಮ ಬಡ ಮಕ್ಕಳು ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಬೇಕೆಂಬ ಆಶಯ ಇವರದು" ಎಂದು ಟೀಕಿಸಿದರು.