ಕರ್ನಾಟಕ

karnataka

ETV Bharat / state

ಇದು ಜನರಿಗೆ ದನಕ್ಕೆ ಬಡಿದಂತೆ ಬಡಿಯುವ ಲಾಕ್​​ಡೌನ್: ಹೆಚ್​​ಡಿಕೆ ಗರಂ - ಹೆಚ್.ಡಿ.ಕುಮಾರಸ್ವಾಮಿ ಎಂದು ಟ್ವೀಟ್​​

ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ, ಲಾಕ್​ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್​​​ಡೌನ್​​ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಹೆಚ್​​ಡಿಕೆ ದೂರಿದ್ದಾರೆ.

ಹೆಚ್ ಡಿಕೆ ಗರಂ
ಹೆಚ್ ಡಿಕೆ ಗರಂ

By

Published : May 10, 2021, 10:37 AM IST

ಬೆಂಗಳೂರು: ಲಾಕ್​ಡೌನ್ ಅಲ್ಲದ ಕಠಿಣ ಲಾಕ್​ಡೌನ್. ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್​ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್​​ಡೌನ್ ಎಂದು ಭಾವಿಸಿರುವ ಸರ್ಕಾರ, ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್​ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್​ಡೌನ್ ಆಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಟ್ವೀಟ್​​ ಮಾಡಿದ್ದಾರೆ.

ಟ್ವೀಟ್ ಮಾಡಿರುವ ಅವರು, ಲಾಕ್​​ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್​ಡೌನ್​​​ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು. ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್​ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ಟೀಕಿಸಿದ್ದಾರೆ.

ಲಾಕ್​ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್​ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್​ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದಿದ್ದಾರೆ.

ಇದನ್ನೂ ಓದಿ : LIVE UPDATES: ರಾಜ್ಯಾದ್ಯಂತ ಲಾಕ್​ಡೌನ್​: ಮೊದಲ ದಿನ ಎಲ್ಲಿಲ್ಲಿ ಹೇಗಿದೆ ಪರಿಸ್ಥಿತಿ?

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಹೇಳಿದ್ದಾರೆ.

For All Latest Updates

TAGGED:

lockdown

ABOUT THE AUTHOR

...view details