ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿನ ಕಾಂಗ್ರೆಸ್ ಪಕ್ಷವೇ ಬೇರೆ. ಈಗ ಇರುವುದು ನಕಲಿ ಕಾಂಗ್ರೆಸ್. ಬಿಜೆಪಿಯವರು ನೆಹರು ಭಾವಚಿತ್ರ ಕಣ್ಮರೆ ಮಾಡ್ತಾರೆ. ಮತ್ತೊಂದು ಕಡೆ, ಜವಹಾರಲಾಲ್ ನೆಹರು ರಾಷ್ಟ್ರ ವಿಭಜನೆ ಆಗಲು ಕಾರಣ ಅಂತ ಸಬೂಬು ಹೇಳುತ್ತಾರೆ. ದೇಶ ವಿಭಜನೆಗೆ ಬಿಜೆಪಿಯೂ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜೆಡಿಎಸ್ನ ರಾಜ್ಯ ಕಚೇರಿ ಜೆ ಪಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ (ಬಿಜೆಪಿಯ) ಸಂಕುಚಿತ ಮನೋಭಾವದಿಂದಲೇ ದೇಶ ವಿಭಜನೆ ಆಗಲು ಕಾರಣ ಎಂದು ಆರೋಪಿಸಿದರು.
75 ವರ್ಷದ ಸವಿನೆನಪಿಗಾಗಿ ಬಿಜೆಪಿಯು ಹರ್ ಘರ್ ತಿರಂಗಾ, ಕಾಂಗ್ರೆಸ್ ಪಕ್ಷವು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿವೆ. ಅಂದು ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಬೇರೆ. ಇಂದು ಕಾಂಗ್ರೆಸ್ ಹೆಸರೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. ಅಂದು ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಕುಮಾರಸ್ವಾಮಿ ಹೇಳಿದರು.
ಜವಾಹರಲಾಲ್ ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇನೆ. ಇದು ನಾವೆಲ್ಲರೂ ತಲೆ ತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು. ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ಸರ್ಕಾರಿ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಹಾಕದಿದ್ದಕ್ಕೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್, ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಸಾವರ್ಕರ್ ಭಾವಚಿತ್ರ ತೆಗೆದರೆಂದು ಮುಸ್ಲಿಂ ಯುವಕರನ್ನು ಬಂಧನ ಮಾಡಿದ್ದೀರಾ, ಅಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂಬ ಕಾರಣಕ್ಕೆ ಇಲ್ಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದು ಹಾಕಿದ್ದೀರಾ, ಇದು ಅಮೃತ ಮಹೋತ್ಸವ ಆಚರಿಸುವ ವಿಧಾನವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನೆಹರು ವಿರುದ್ಧ ವಿಭಜನೆ ಆರೋಪ ಮಾಡುತ್ತಿರಲ್ಲಾ, ಅಂದು ವಿಭಜನೆ ಆಗದಿದ್ದರೆ ದೇಶ ಉಳಿಯುತಿತ್ತೇ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:ಹೊಸಪೇಟೆ.. ದೇಶದ ಅತಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸುತ್ತಿರುವ ತ್ರಿವರ್ಣ
ರಾಜ್ಯದ ಜನತೆಗೆ ಊಟ, ವಸತಿ ಕೊಡದೇ ಹರ್ ಘರ್ ತಿರಂಗಾ ಮಾಡಿ ಪ್ರಯೋಜನ ಏನು?. ಕೋವಿಡ್ ಅನಾಹುತದ ಸಂದರ್ಭದಲ್ಲಿ ಏನೇನಾಯಿತು. ಮನೆ ಮೇಲೆ ಬಾವುಟ ಹಾರಿಸಿ ಎಂದು ಕರೆಕೊಟ್ಟಿದ್ದೀರಾ. ಆದರೆ, ಎಷ್ಟೋ ಜನಕ್ಕೆ ವಾಸ ಮಾಡಲು ಮನೆಯೇ ಇಲ್ಲ. ಫ್ಲೈ ಓವರ್ಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ವಾಸ ಮಾಡುತ್ತಿದ್ದಾರೆ. ಬೃಹತ್ ರ‍್ಯಾಲಿಗಳನ್ನು ಮಾಡಿಕೊಂಡು ಹೊರಟ್ಟಿದ್ದಿರಿ, ನಿಮ್ಮ ರ‍್ಯಾಲಿಗಳಿಂದ ಜನರ ಹೊಟ್ಟೆ ತುಂಬಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಸೌಲಭ್ಯಗಳನ್ನು ಕೊಡುವುದು ನಿಲ್ಲಿಸಬೇಕು ಎಂದು ಹೇಳುತ್ತಾರೆ. ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅಂತಹ ಕುಟುಂಬಗಳ ಗತಿ ಏನು? ಎಂದು ಬಿಜೆಪಿ ಸರ್ಕಾರವನ್ನ ಹೆಚ್ಡಿಕೆ ಪ್ರಶ್ನಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಈ ಸ್ವಾತಂತ್ರ್ಯ ದಿನ ಪ್ರತಿ ಕನ್ನಡಿಗರಿಗೆ, ಪ್ರತಿ ಭಾರತೀಯರಿಗೆ ಮಹತ್ವದ ದಿನ. ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಇಷ್ಟು ದಿನಗಳಲ್ಲಿ ಕಂಡಿದ್ದೇವೆ. ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ. ಇಂದು ಕನ್ನಡಿಗರಿಗೆ ಅತ್ಯಂತ ಮಹತ್ವವಾದ ದಿನ. ದೇಶಕ್ಕೆ ಬೇಕಾಗಿರೋದು ಶಾಂತಿ, ಸಹಬಾಳ್ವೆ. ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, 1995ರಲ್ಲೇ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ. ದೇವೇಗೌಡರು ಧ್ವಜಾರೋಹಣ ಮಾಡಿದ್ರು. ಮುಂದಿನ ಬಾರಿ ನಾನು ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಹೆಚ್ .ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಧ್ವಜಾರೋಹಣ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ರಾಜ್ಯದ ಜನರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಇಬ್ರಾಹಿಂ, ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ಹೆಚ್ ಡಿ ದೇವೇಗೌಡರು. ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ ಆಗಿ ಧ್ವಜಾರೋಹಣ ಮಾಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ಸಂದೇಶದಲ್ಲಿ ಕುವೆಂಪು ಅವರ ಕವನ ಕೇಳಿ ಸಂತೋಷವಾಯಿತು. ಮುಂದೆ ಕುಮಾರಸ್ವಾಮಿಯವರು ಹಸಿವು ಮುಕ್ತ, ಬಡತನ ಮುಕ್ತ ಕರ್ನಾಟಕವನ್ನಾಗಿ ಮಾಡ್ತಾರೆ. ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಇದನ್ನೂ ಓದಿ:20 ಟನ್ ತಾಜಾ ತರಕಾರಿಯಲ್ಲಿ ಅರಳಿತು ತ್ರಿವರ್ಣ ಧ್ವಜ.. ಆಹಾರೋತ್ಪನ್ನದಲ್ಲಿ ಭಾರತದ ಪ್ರಗತಿ