ಬೆಂಗಳೂರು :ರಾಜ್ಯದ ಪೊಲೀಸ್ ಸಿಬ್ಬಂದಿಗೆ ವೀಕ್ಯಾಪ್ ನೀಡಬೇಕು ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸಿಎನ್ ಮಂಜೇಗೌಡ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಫೆಬ್ರುವರಿ 17ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದ್ದು, ಆ ಸಂದರ್ಭ ಪೊಲೀಸ್ ಸಿಬ್ಬಂದಿಗೆ ವೀಕ್ಯಾಪ್ ವಿತರಿಸುವ ಬಗ್ಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕಾನ್ಸ್ಟೇಬಲ್ಗಳು ಹಾಗೂ ಮುಖ್ಯ ಕಾನ್ಸ್ಟೇಬಲ್ಗಳಿಗೆ ಈ ವೀಕ್ಯಾಪ್ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಸದ್ಯ ಪೊಲೀಸರು ಧರಿಸುತ್ತಿರುವ ಕ್ಯಾಪ್ಗಳು ತುಂಬಾ ಹಳೆಯದಾಗಿವೆ. ಇತರೆ ರಾಜ್ಯಗಳಲ್ಲಿಯೂ ಇಂದು ಹಗುರಾದ ವಿಕ್ಯಾಪ್ಗಳನ್ನು ನೀಡುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ಕರ್ನಾಟಕದಲ್ಲಿ ಈ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು. ರಾಜ್ಯದ ಹಲವೆಡೆ ಪೊಲೀಸರ ಮೇಲೆ ದಾಳಿಗಳು ಆಗುತ್ತಿವೆ. ವೀಕ್ಯಾಪ್ ನೀಡುವುದರಿಂದ ಇವರಿಗೆ ಪ್ರತ್ಯೇಕ ಗುರುತು ಲಭಿಸುತ್ತದೆ. ಈ ನೀಡಿಕೆಯು ಸರ್ಕಾರಕ್ಕೆ ಅಷ್ಟೇ ದೊಡ್ಡ ಹೊರೆ ಆಗುವುದಿಲ್ಲ ಎಂದರು.
ಸಂಚಾರ ನಿಯಮ ಉಲ್ಲಂಘಿಸಿದವರಿಂದ ರಾಜ್ಯ ಸರ್ಕಾರಕ್ಕೆ 10,300 ಕೋಟಿ ರೂಪಾಯಿ ದಂಡಪಾವತಿ ಆಗಬೇಕಿರುವುದು ಬಾಕಿ ಉಳಿದಿದೆ. ಶೇಕಡ 50 ರಷ್ಟು ರಿಯಾಯಿತಿ ನೀಡಿದ ಹಿನ್ನೆಲೆ ಸುಮಾರು ನೂರು ಕೋಟಿ ಮೊತ್ತದ ದಂಡ ವಸೂಲು ಆಗಿದೆ. ಎಲ್ಲಾ ದಂಡ ವಸೂಲಿ ಆಗಬೇಕು ಎಂದರೆ ಈ ಕೊಡುಗೆಯನ್ನು ಇನ್ನು ಎರಡು ಮೂರು ತಿಂಗಳು ಮುಂದುವರಿಸಬೇಕು. ಸರ್ಕಾರಕ್ಕೆ ಬರಬೇಕಾದ ಮೊತ್ತವು ಬರುತ್ತದೆ ಹಾಗೂ ಆ ಮೊತ್ತವನ್ನು ಸರ್ಕಾರ ಪೊಲೀಸರ ಅನುಕೂಲಕ್ಕೆ ಬಳಸಬೇಕು. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಸಹ ತಪ್ಪುತ್ತದೆ ಎಂದು ತಿಳಿಸಿದರು.
ಪೊಲೀಸರ ಮಕ್ಕಳಿಗೆ ಶೇಕಡ ಐದರಷ್ಟು ಮೀಸಲಾತಿ :ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸರ ಮಕ್ಕಳಿಗೆ ಶೇಕಡ ಐದರಷ್ಟು ಮೀಸಲಾತಿಯನ್ನು ಕೊಡಬೇಕು. ಇದರಿಂದ ತಮ್ಮ ಮಕ್ಕಳಿಗೆ ಪೊಲೀಸರು ಸಹ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಪೊಲೀಸರ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ. ಪೊಲೀಸ್ ಸಿಬ್ಬಂದಿಗೆ ವೀಕ್ಯಾಬ್ ನೀಡಬೇಕು ಎಂಬ ವಿಚಾರವಾಗಿ ನಡೆಸುತ್ತಿರುವ ಹೋರಾಟ ಮುಂದುವರಿಸುತ್ತೇನೆ. ಮತ್ತು ಈಗಾಗಲೇ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳಿಗೂ ಇದೇ ವಿಚಾರವಾಗಿ ಮನವಿ ಮಾಡಲಿದ್ದು, ಪಕ್ಷದ ವರಿಷ್ಠರ ಸಲಹೆ ಪಡೆದು ಮುಂಬರುವ ದಿನಗಳಲ್ಲಿ ಕೇಂದ್ರ ಗೃಹ ಸಚಿವರನ್ನು ಸಹ ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.