ಬೆಂಗಳೂರು :ರಾಜಧಾನಿಯಲ್ಲಿಅಧಿಕವಾಗುತ್ತಿರುವ ಸೈಬರ್, ಆರ್ಥಿಕ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸರ್ಕಾರ ಸಿಐಡಿಗೆ ನೂತನವಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಹುದ್ದೆ ಸೃಷ್ಟಿಸಿದೆ. ಈ ಸಂಬಂಧ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಅಸ್ತು ಅಂದಿದೆ.
ಸಿಐಡಿಯಲ್ಲಿ ಮೊದಲ ಬಾರಿಗೆ ಸೈಬರ್, ಆರ್ಥಿಕ ಅಪರಾಧ ಹಾಗೂ ನಾರ್ಕೋಟಿಕ್ಸ್ ಅಪರಾಧ ವಿಭಾಗಕ್ಕೆ ಎಡಿಜಿಪಿ ಹುದ್ದೆ ಸೃಷ್ಟಿಸಿದ್ದು, ಇದಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರನ್ನು ಸರ್ಕಾರ ನೇಮಿಸಿದೆ. ಪೊಲೀಸ್ ಕಂಪ್ಯೂಟರ್ ವಿಭಾಗದ ಉಸ್ತುವಾರಿ ಜೊತೆಗೆ ಸಿಐಡಿ ಸಿಇಎನ್ ವಿಭಾಗದ ಎಡಿಜಿಪಿಯಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಇದೇ ವಿಭಾಗಕ್ಕೆ ಡಿಐಜಿ ಹುದ್ದೆ ಮಂಜೂರಾಗಿದ್ದು, ಶೀಘ್ರದಲ್ಲೇ ಡಿಐಜೆ ದರ್ಜೆ ಅಧಿಕಾರಿಯನ್ನು ನಿಯೋಜಿಸುವ ಸಾಧ್ಯತೆಯಿದೆ.
ಸಿಐಡಿಯಲ್ಲಿ ಬಾಕಿ ಉಳಿದಿದ್ದ 854 ಪ್ರಕರಣಗಳ ಪೈಕಿ ಕಳೆದ ಆರು ತಿಂಗಳಲ್ಲಿ 354 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 544 ಪ್ರಕರಣಗಳು ಉಳಿದಿದ್ದು, ಇದರ ಜೊತೆಗೆ ಇನ್ನೂ 100 ಕೇಸ್ಗಳು ಸೇರ್ಪಡೆಯಾಗಿವೆ. ಸೈಬರ್ ವಂಚನೆ, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ ಸೇವನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಉತ್ತಮ ಸಮಾಜಕ್ಕೆ ಡ್ರಗ್ಸ್ ಸೇವನೆ ಅಪಾಯಕಾರಿ. ಇದನ್ನು ಅರಿತರೂ ಯುವ ಜನತೆ ಡ್ರಗ್ಸ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ.
ಸೈಬರ್ ವಂಚನೆ ಸಂಬಂಧ ರಾಜ್ಯದಲ್ಲಿರುವ 43 ಸೈಬರ್, ಆರ್ಥಿಕ ಹಾಗೂ ನಾರ್ಕೊಟಿಕ್ಸ್ ವಿಭಾಗದ ಠಾಣೆ (ಸಿಇಎನ್) ಹಾಗೂ ಸಿವಿಲ್ ಪೊಲೀಸ್ ಠಾಣೆಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಆಯಾ ವಿಭಾಗದ ಠಾಣೆ ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಪ್ರಕರಣ ಕುರಿತಂತೆ ಅವರಿಗೆ ಸೂಕ್ತ ತರಬೇತಿ, ಆತ್ಯಾಧುನಿಕ ಉಪಕರಣ ಖರೀದಿ ಹಾಗೂ ಪ್ರಕರಣಗಳ ಉಸ್ತುವಾರಿಗಾಗಿ ಹೊಸದಾಗಿ ಎಡಿಜಿಪಿ ಹಾಗೂ ಡಿಐಜಿ ಹುದ್ದೆ ಸೃಷ್ಟಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಸರ್ಕಾರ ಅನುಮತಿ ನೀಡಿ ಅಧಿಕಾರಿಯನ್ನು ನೇಮಿಸಿದ್ದು ಮುಂದಿನ ದಿನಗಳಲ್ಲಿ ಪ್ರಕರಣ ತನಿಖೆ ಉಸ್ತುವಾರಿ ಹಾಗೂ ನಿರ್ವಹಣೆ ಚುರುಕಾಗಲಿದೆ ಎಂದು ಈಟಿವಿ ಭಾರತ್ ಗೆ ಸಿಐಡಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ ಎ ಸಲೀಂ ತಿಳಿಸಿದ್ದಾರೆ.
ಸಿಬಿಐ, ಎನ್ಐಎ ಮಾದರಿಯಲ್ಲಿ ಸಿಐಡಿಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ತನಿಖಾ ಸಂಸ್ಥೆಗಳ ಮಾದರಿಯಲ್ಲಿ ಎಫ್ಐಆರ್ ದಾಖಲಿಸಿಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದಿಸಿದರೆ ಕೊಲೆ, ಆರ್ಥಿಕ ವಂಚನೆ ಇನ್ನಿತರ ಗಂಭೀರ ಪ್ರಕರಣಗಳನ್ನು ಸಿಐಡಿಗೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಫ್ಐಆರ್ ಆಧಾರದ ಮೇರೆಗೆ ಸಿಐಡಿ ತನಿಖೆ ನಡೆಸುತ್ತಿದೆ. ಎಫ್ಐಆರ್ ದಾಖಲಿಸುವ ಅಧಿಕಾರ ನೀಡಿದರೆ ಎಫ್ಐಆರ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ರಸ್ತೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ಮಂಡ್ಯ ಎಸ್ಪಿ ಯತೀಶ್ ಎಚ್ಚರಿಕೆ