ಬೆಂಗಳೂರು: ಬ್ಯಾಂಕ್ ಸಾಲ ಮರುಪಾವತಿಸದೆ ವಂಚಿಸಿರುವ ಆರೋಪದಡಿ ಮಾಜಿ ಸಚಿವ, ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ನಗರದ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹ ಬ್ಯಾಂಕ್ಗಳಿಂದ ಸಾಲ ಪಡೆದು ಪಾವತಿಸದೇ ವಂಚಿಸುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಎಂಬವರು ದೂರು ದಾಖಲಿಸಿದ್ದಾರೆ.
ದೂರಿನ ವಿವರ:ಬೆಳಗಾವಿ ಜಿಲ್ಲೆ ಗೋಕಾಕ್ ಫಾಲ್ಸ್ ರಸ್ತೆಯಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ರಮೇಶ್ ಜಾರಕಿಹೊಳಿ ಹಾಗೂ ನಿರ್ದೇಶಕ ವಸಂತ್ ವಿ.ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಎ.ಪಾವಡೆ ಅವರು ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ನ ಷರತ್ತುಗಳನ್ನು ಒಪ್ಪಿ, ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಅದರ ಸಮೂಹ ಬ್ಯಾಂಕ್ಗಳಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತಗಳಲ್ಲಿ 2013ರ ಡಿಸೆಂಬರ್ 7ರಿಂದ 2017ರ ಮಾರ್ಚ್ 31ರವರೆಗೆ ಹಂತ ಹಂತವಾಗಿ 232 ಕೋಟಿ 88 ಲಕ್ಷ ರೂ. ಸಾಲ ಪಡೆದಿದ್ದಾರೆ.