ಕರ್ನಾಟಕ

karnataka

ETV Bharat / state

ಕೋವಿಡ್ ಮಾರ್ಗಸೂಚಿ ಬದಲಾವಣೆಯ ಅಂಶಗಳು ಶೀಘ್ರದಲ್ಲೇ ಪ್ರಕಟ: ಡಾ.ಕೆ.ಸುಧಾಕರ್

ಈ ಬಗ್ಗೆ ತಜ್ಞ ವೈದ್ಯರು, ಪರಿಣತರ ಜೊತೆ ಚರ್ಚೆ ನಡೆಸಲಾಗಿದ್ದು, ಕೊರೊನಾ ತಡೆಗೆ ಹಲವಾರು ಸಲಹೆಗಳನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಕೋವಿಡ್ -19 ಮಾರ್ಗಸೂಚಿ ಬದಲಾವಣೆ ಮಾಡುತ್ತಿದ್ದು ಅಂತಿಮ ರೂಪುರೇಷೆಯನ್ನು ಇಂದು ಸಂಜೆ ಅಥವಾ ನಾಳೆಯೊಳಗೆ ಪ್ರಕಟಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

final-outline-of-the-covid-guidelines-will-publish-soon
ಸಚಿವ ಡಾ ಕೆ ಸುಧಾಕರ್

By

Published : Jul 2, 2020, 4:04 PM IST

ಬೆಂಗಳೂರು: ಕೋವಿಡ್ ಮಾರ್ಗಸೂಚಿ ಬದಲಾವಣೆ ಮಾಡುತ್ತಿದ್ದು, ಅಂತಿಮ ರೂಪುರೇಷೆ ಇಂದು ಸಂಜೆ ಅಥವಾ ನಾಳೆಯೊಳಗೆ ಪ್ರಕಟಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ತಜ್ಞ ವೈದ್ಯರು, ಪರಿಣಿತರ ಜೊತೆ ಚರ್ಚೆ ಮಾಡಿದ ನಂತರ ಅವರು ಕೆಲ ಸಲಹೆ ಕೊಟ್ಟಿದ್ದಾರೆ. ಅದರ ಸಾಧಕ-ಬಾಧಕಗಳ ಕುರಿತು ಚರ್ಚೆ ಆಗುತ್ತಿದೆ. ಬಳಿಕ ಟಾಸ್ಕ್‌ಫೋರ್ಸ್ ಕಮಿಟಿ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸೋಂಕಿತರು ಹೆಚ್ಚಾದಂತೆ ಕೇರ್ ಸೆಂಟರ್ ಹೆಚ್ಚಳ ಮಾಡಬೇಕು. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಅಮಾನವೀಯವಾಗಿ ಮಾಡುತ್ತಿರುವ ಕುರಿತು ನಮಗೆ ಎರಡು ಮೂರು ಕಡೆಯಿಂದ ದೂರುಗಳು ಬಂದಿವೆ. ಬಳ್ಳಾರಿಯ್ದು ಅಮಾನವೀಯ ಘಟನೆಯಾಗಿದ್ದು ತಕ್ಷಣ ಕ್ರಮ ವಹಿಸಲಾಗಿದೆ. ಈ ಕುರಿತಾಗಿ ಜಿಲ್ಲಾಧಿಕಾರಿ ಕೂಡಾ ಕ್ಷಮೆ ಕೇಳಿದ್ದಾರೆ. ಪ್ರಕರಣದ ಸಂಬಂಧ 6 ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು.

ಕೋವಿಡ್ ಮಾರ್ಗಸೂಚಿ ಬದಲಾವಣೆಯ ಅಂತಿಮ ರೂಪುರೇಷೆ ಕುರಿತು ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

ಅಂತ್ಯ ಸಂಸ್ಕಾರಕ್ಕೆ ಸ್ಪಷ್ಟ ಕಾನೂನು:

ಅಂತ್ಯ ಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರುತ್ತೇವೆ. ಯಾರೇ ಆದರೂ ಮಾನವೀಯ ಅಂಶ ಇರಬೇಕು. ಮನುಷ್ಯ ಶವ ಆದ ಕೂಡಲೇ ಅಮಾನವೀಯವಾಗಿ ನೋಡೋದು ಮನುಷ್ಯತ್ವ ಅಲ್ಲ. ಇಂತಹ ಘಟನೆಯನ್ನು ಸರ್ಕಾರ ಖಂಡಿಸುತ್ತದೆ. ಮತ್ತೆ ಇಂತಹ ಘಟನೆಗೆ ಅವಕಾಶವಿಲ್ಲ. ಶೀಘ್ರವೇ ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಅಂತ್ಯ ಸಂಸ್ಕಾರಕ್ಕೆ ಸ್ಥಳದ ಕೊರತೆ ಇಲ್ಲ:

ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆ ಇಲ್ಲ. ಅಂತಹ ಸ್ಥಿತಿ ಇನ್ನೂ ಬೆಂಗಳೂರಿನಲ್ಲಿ ನಿರ್ಮಾಣ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಆ ಪ್ರಮಾಣದಲ್ಲಿ ಸಾವು ಕೂಡಾ ಆಗುತ್ತಿಲ್ಲ. ನಿನ್ನೆ ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ. ರೋಗದ ಲಕ್ಷಣ ಇರೋರು, ಲಕ್ಷಣ ಇಲ್ಲದೆ ಇರೋರಿಗೆ ಪಾಸಿಟಿವ್ ಇರುತ್ತದೆ. ಅವರಿಗೆ ಯಾವುದೇ ರೋಗ ಲಕ್ಷಣ ಇರೋದಿಲ್ಲ. ಅಂತಹವರನ್ನು ಎ ಕೆಟಗರಿ ಅಂತ ಮಾಡಲು ನಿರ್ಧರಿಸಲಾಗಿದೆ ಎಂದರು.

ಮೈಲ್ಡ್ ಮತ್ತು ಎ ಸಿಂಟಂಮ್ಸ್ ಇರೋರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ತಜ್ಞರಿಂದ ಬಂದಿದೆ. ವಿಶ್ವದಲ್ಲಿ ಅನೇಕ ಕಡೆ ಹೀಗೆ ಮಾಡಿದ್ದಾರೆ. ನಾವು ಹಾಗೆ ಮಾಡಿ ಅಂತಹವರ ಮೇಲೆ ನಿಗಾ ವಹಿಸುತ್ತೇವೆ. ರೋಗದ ಲಕ್ಷಣ ತೀವ್ರವಾದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸೋಂಕಿತ ಪ್ರಕರಣಗಳ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಆತಂಕಕ್ಕೆ ಒಳಗಾವುದು ಬೇಡ, ಲಕ್ಷಾಂತರ ಜನ ಹೊರ ರಾಜ್ಯಗಳಿಂದ ಬಂದಿದ್ದಾರೆ. ನಾವು ಜನಜೀವನ ಸಹಜ ಸ್ಥಿತಿಗೆ ತರಲು ಲಾಕ್‌ಡೌನ್ ಸಡಿಲಿಸಿದ್ದೇವೆ. ಸಡಿಲ ಆಗೋ ಮುಂಚೆ ಕೊರೊನಾ ಸೋಂಕಿತರ ಸಂಖ್ಯೆ ಮೂರು ಅಂಕಿ ದಾಟಿರಲಿಲ್ಲ. ಮೊದಲ ನಾಲ್ಕು ತಿಂಗಳಲ್ಲಿ 1,300 ಕೇಸ್‌ಗಳಿದ್ದವು. ಆದರೆ, ಕಳೆದ ಎಂಟು ದಿನಗಳಲ್ಲಿ 4 ಸಾವಿರ ಕೇಸ್ ಆಗಿದೆ. ಕ್ಲಸ್ಟರ್, ಪ್ರೈಮರಿ ಕಾಂಟ್ಯಾಕ್ಟ್‌ನಲ್ಲಿ ಸೋಂಕು ಹರಡಿದೆ. ನಮ್ಮ ಗುರಿ ಸಾವಿನ ಪ್ರಮಾಣ ಕಡಿಮೆ ಇರಬೇಕು. ಸಾವಿನ ಪ್ರಮಾಣ ನಮ್ಮಲ್ಲಿ ಕಡಿಮೆ ಇದೆ. ಬೇರೆ ವೈರಸ್ ಸೋಂಕಿನ ಸಾವಿನ ಪ್ರಮಾಣಕ್ಕಿಂತ ಕೊರೊನಾ ಸೋಂಕಿನ ಸಾವಿನ ಪ್ರಮಾಣ ‌ಕಡಿಮೆ ಇದೆ. ಹೀಗಾಗಿ ಇದರ ಕಡೆ ಹೆಚ್ಚು ಗಮನಹರಿಸುತ್ತೇವೆ. ಜೀವ ಉಳಿಸೋದು ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು ಎಂದರು.

'ಡಿಕೆಶಿಗೆ ಒಳ್ಳೆಯದಾಗಲಿ'

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯ ಪ್ರವಾಸ ಮಾಡಲಿ. ಪಾಪ, ದಯನೀಯವಾಗಿರುವ ಪಕ್ಷವನ್ನು ಅವರು ಸ್ವಲ್ಪ ಉತ್ತಮ ಸ್ಥಿತಿಗೆ ತರಲಿ ಎಂದು ವ್ಯಂಗ್ಯವಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸದೃಢವಾಗಿರಬೇಕು. ಆಗ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಟಾಂಗ್ ನೀಡಿದರು.

ABOUT THE AUTHOR

...view details