ಕರ್ನಾಟಕ

karnataka

By

Published : Mar 1, 2023, 10:44 AM IST

ETV Bharat / state

ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧನಾಗಿ ಬಿಜೆಪಿಗೆ ಸೇರಿದ್ದೇನೆ: ಭಾಸ್ಕರ್​ ರಾವ್​

ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ - ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ - ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

Ex  Police Commissioner Bhaskar Rao Joins BJP
ಭಾಸ್ಕರ್​ ರಾವ್​ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಕಾರ್ಯವೈಖರಿಯಲ್ಲಿ ಬೆಳವಣಿಗೆ ಕಂಡು ಬಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯವಾದದ ಸನಾತನ ಪರವಾದ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿ ನಾಯಕರ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ನನ್ನ ಕೊಡುಗೆ ನೀಡುತ್ತೇನೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇಂದು ಬಿಜೆಪಿ ಸೇರ್ಪಡೆಯಾದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಭಾಸ್ಕರ್ ರಾವ್ ಜತೆ ಅವರ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.

ರಾಷ್ಟ್ರೀಯತೆಗೆ ಬದ್ಧತೆ ಇರುವ ಪಕ್ಷಕ್ಕೆ ಸೇರ್ಪಡೆ:ಪಕ್ಷ ಸೇರ್ಪಡೆ ನಂತರ ಮಾತನಾಡಿದ ಭಾಸ್ಕರ್ ರಾವ್, ಇಂದು ಬಹಳ ಸಂತೋಷದ ದಿನ. ಮರಳಿ ಸನಾತನ ಧರ್ಮಕ್ಕೆ ಸೇರಿರುವ ಪಕ್ಷಕ್ಕೆ ಹಾಗೂ ರಾಷ್ಟ್ರೀಯತೆಗೆ ಬದ್ಧತೆ ಇರುವ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಇದು ಖುಷಿ ತಂದಿದೆ. ಬಾಲ್ಯದಿಂದಲೇ ನಾನು ರಾಷ್ಟ್ರೀಯತೆ, ಸನಾತನ ಧರ್ಮಕ್ಕೆ ಬದ್ಧವಾಗಿದ್ದೆ. ಪೊಲೀಸ್ ಅಧಿಕಾರಿಯಾಗಿದ್ದ ನಾನು ಸ್ವಯಂ ನಿವೃತ್ತಿ ಬಳಿಕ ಕೆಲಕಾಲ ಉತ್ಸಾಹದಿಂದ ರಾಜಕಾರಣದಲ್ಲಿ ಬದಲಾವಣೆ ತರಲು ಕೆಲಸ ಮಾಡುವ ಆಸೆ ಹೊಂದಿದ್ದ. ಆದರೆ ಆಮ್ ಆದ್ಮಿ ಪಕ್ಷದಲ್ಲಿ ಒಂದು ವರ್ಷ ಇದ್ದರೂ ಆ ಪಕ್ಷ ಕರ್ನಾಟಕದಲ್ಲಿ ಬೆಳೆಯಲು ಸಾಧ್ಯವೇ ಆಗುತ್ತಿಲ್ಲ. ಬಹಳಷ್ಟು ಪ್ರಯತ್ನಪಟ್ಟೆ. ಆದರೆ ಆಗಲಿಲ್ಲ. ಅವರ ಕಾರ್ಯ ವೈಖರಿಯಲ್ಲಿಯೂ ಬೆಳವಣಿಗೆ ಕಂಡು ಬಂದಿಲ್ಲ. ನನಗೆ ಈಗ 58 ವರ್ಷವಾಗಿದೆ, ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಒಂದು ಉತ್ತಮ ಪಕ್ಷಕ್ಕೆ ಸೇರಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ, ಮಾಜಿ ಸಿಎಂ ಯಡಿಯೂರಪ್ಪ, ಕಟೀಲ್, ಸಿಎಂ ಬೊಮ್ಮಾಯಿ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಾನು ಭಾಗಿಯಾಗಲು ನನ್ನದೇ ಆದ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ನಾನು ಪೂರ್ಣ ರೀತಿಯ ಸಹಕಾರ ನೀಡಲು ಬಂದಿದ್ದೇನೆ. ‌ರಾಷ್ಟ್ರ ನಿರ್ಮಾಣಕ್ಕೆ ನನ್ನ ಕೊಡುಗೆಯನ್ನು ಕೊಡುತ್ತೇನೆ ಎಂದರು.

ಭಾರತದ ಸ್ಥಾನಮಾನ ಗಟ್ಟಿ ಪಡಿಸಲು ಇದೊಂದು ಪಕ್ಷದಿಂದ ಮಾತ್ರ ಸಾಧ್ಯವೇ ಹೊರತು ಇನ್ನೊಂದು ಪಕ್ಷದಿಂದ ಸಾಧ್ಯವಿಲ್ಲ. ಮೋದಿ ಅವರಿಗೆ ಕೈ ಜೋಡಿಸಿ ಭಾರತವನ್ನು ಗಟ್ಟಿಗೊಳಿಸಬೇಕು. ಪಕ್ಷ ಗಟ್ಟಿಯಾಗಬೇಕು. ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಇಡೀ ಜಗತ್ತಿನಲ್ಲಿ ನಮ್ಮ ದೇಶ ಮಜಬೂತಾಗಬೇಕು. ಅಂತಹ ಕಾರ್ಯದಲ್ಲಿ ಬಿಜೆಪಿ ತೊಡಗಿದೆ. ಆ ಪಕ್ಷದ ಜೊತೆ ಗುರುತಿಸಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಯುವಕರು ಮತ್ತು ಮಹಿಳೆಯರಿಗೆ ಬಹಳ ಉತ್ತಮ ಸ್ಥಾನಮಾನಗಳು ಈ ಪಕ್ಷದಲ್ಲಿ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ನೀಡುವ ಮಾರ್ಗದರ್ಶನದ ಆಧಾರದಲ್ಲಿ ನಾನು ಕೆಲಸ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ ಎಂದು ಭಾಸ್ಕರ್​ ರಾವ್​ ಹೇಳಿದರು.

ಹೃದಯ ಪೂರ್ವಕ ಸ್ವಾಗತ: ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ನಿವೃತ್ತಿಯ ನಂತರ ಆಪ್ ಪಕ್ಷವನ್ನು ಸೇರಿದರು. ಒಂದು ವರ್ಷ ರಾಜಕಾರಣದ ಅನುಭವ ಪಡೆದು ಈ ದೇಶಕ್ಕೆ ನರೇಂದ್ರ ಮೋದಿಯವರ ಆಡಳಿತ ರಾಜ್ಯಕ್ಕೆ ಬೊಮ್ಮಾಯಿ ಆಡಳಿತದ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕವೇ ಕಲ್ಯಾಣವಾಗಲಿದೆ ಎನ್ನುವ ಅಪೇಕ್ಷೆ ಹೊಂದಿ ಪಕ್ಷದ ಸಿದ್ಧಾಂತ ಮತ್ತು ವಿಚಾರಗಳನ್ನು ಒಪ್ಪಿ ಬಿಜೆಪಿಗೆ ಬಂದಿದ್ದಾರೆ. ಅವರನ್ನು ಹೃದಯ ಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದೇನೆ. ಅವರ ಜತೆ ಬಂದಿರುವ ಇತರ ಸಹಪಾಠಿಗಳನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ ಎಂದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಚುನಾವಣಾ ಬಿಸಿ ವಾತಾವರಣ ಏರುತ್ತಿರುವ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಅನಿಸಿಕೆ ಭಾವನೆಗಳು ಜನರಲ್ಲಿ ಇದೆ. ಹತ್ತಾರು ಜನ ರಾಜಕೀಯ ನಾಯಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಆ ಸಂದರ್ಭದಲ್ಲಿ ಇಂದು ಭಾಸ್ಕರ್ ರಾವ್ ಬಿಜೆಪಿಗೆ ಬಂದಿದ್ದಾರೆ. ಅವರ ಆಡಳಿತಾತ್ಮಕ ಅನುಭವವನ್ನು ಪಕ್ಷ ಸ್ವೀಕರಿಸಲಿದೆ. ಅವರು ಕಾರ್ಯಕರ್ತನಾಗಿ ಪಕ್ಷಕ್ಕೆ ಬಂದಿದ್ದಾರೆ. ಯಾವುದೇ ಆಶಯ, ಆಕಾಂಕ್ಷೆಗಳನ್ನು ಇರಿಸಿಕೊಳ್ಳದೆ ಬಂದಿದ್ದಾರೆ. ಪಕ್ಷವನ್ನ ಗಟ್ಟಿ ಮಾಡಿ ಪಕ್ಷದ ಮೂಲಕ ರಾಜಕಾರಣದ ಮೂಲಕ ಜನ ಸೇವೆಯನ್ನು ಮಾಡುತ್ತೇನೆ ಎನ್ನುವ ಇಚ್ಛೆಯನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಹೃದಯ ಪೂರ್ವಕವಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದರು.

ಪೊಲೀಸ್ ನೇಮಕಾತಿ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪೊಲೀಸ್ ನೇಮಕಾತಿ ಪರೀಕ್ಷೆ ಇನ್ನೊಮ್ಮೆ ಆಗಬೇಕು ಎಂದಿದ್ದೆನೇ ಹೊರತು ಇದರಲ್ಲಿ ನಾನು ಯಾರ ಪಾತ್ರ ಇರುವ ಬಗ್ಗೆ ಆರೋಪ ಮಾಡಿರಲಿಲ್ಲ. ಪ್ರಶ್ನೆ ಪತ್ರಿಕೆ ಲೀಕ್ ಇದೇ ಮೊದಲ ಬಾರಿ ಆಗಿಲ್ಲ. ಹಲವಾರು ಬಾರಿ ಆಗಿದೆ. ನಾನು ಯುಪಿಎಸ್‌ಸಿ ಬರೆದಾಗ ಕೂಡ ಇದೇ ರೀತಿಯಾಗಿತ್ತು. ಆಗ ಮತ್ತೊಮ್ಮೆ ಪರೀಕ್ಷೆ ಆಯೋಜನೆ ಮಾಡಲಾಗಿತ್ತು. ಪಕ್ಷದ ಹಿರಿಯರು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಇದ್ದಾರೆ. ಸಾವಿರಾರು ಯುವಕರ ಭವಿಷ್ಯ ಸರಿಪಡಿಸುವ ಅವಕಾಶವಿದೆ. ಇದನ್ನು ಸರಿಪಡಿಸಿ ಅವರಿಗೆ ಒಳ್ಳೆ ದಾರಿ ಮಾಡಿಕೊಡಲು ಅವಕಾಶವಿದೆ. ಅದನ್ನು ಬಿಜೆಪಿ ಮಾಡಲಿದೆ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಆಮ್‌ ಆದ್ಮಿ ಪಕ್ಷ ತ್ಯಜಿಸಿ ಬಿಜೆಪಿ ಸೇರಲು ಸಜ್ಜಾದ ಭಾಸ್ಕರ್ ರಾವ್: ನಾಳೆ ಪಕ್ಷ ಸೇರ್ಪಡೆ

ABOUT THE AUTHOR

...view details