ಬೆಂಗಳೂರು:ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 190ನೇ ಹುತಾತ್ಮ ದಿನಾಚರಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪ್ರತೀ ವರ್ಷವೂ ಸಂಗೊಳ್ಳಿ ರಾಯಣ್ಣ ದಿನಾಚರಣೆಯನ್ನು ದೊಡ್ಡದಾಗಿ ಮಾಡಿ. ಈ ನೆಲಕ್ಕೆ ಹೋರಾಡಿದ ಪ್ರತಿಯೊಬ್ಬರನ್ನು ಕೂಡ ನೆನೆಸಿಕೊಳ್ಳಬೇಕು. ಹುತಾತ್ಮರ ದಿನಾಚರಣೆಯ ದಿನ ಕೇವಲ ಗಾಂಧಿಜಿಯನ್ನಷ್ಟೇ ನೆನೆಸಿಕೊಳ್ತಾ ಇಲ್ಲ. ಈ ನಾಡಿಗಾಗಿ ರಕ್ತ ಸುರಿಸಿದ ಅದೆಷ್ಟೋ ಮಂದಿಯನ್ನು ನೆನಸಿಕೊಳ್ಳಬೇಕು.
ಸ್ವಾರ್ಥಕ್ಕಾಗಿ ಇವರ್ಯಾರು ಹೋರಾಟ ಮಾಡಿಲ್ಲ. ಗಾಂಧೀಜಿ ಪ್ರಧಾನಿಯಾಗಲು, ರಾಯಣ್ಣ ಕಿತ್ತೂರು ರಾಜ್ಯದ ರಾಜನಾಗಲು ಹೋರಾಡಿಲ್ಲ. ಈ ನೆಲ ಹಾಗೂ ನಾಡಿನ ರಕ್ಷಣೆ ಮಾಡಲು ಹೋರಾಡಿದ್ದರು ಎಂದರು.
ಬೆಳಗಾವಿ ಒಂದಿಂಚೂ ಅವರಿಗೆ ಸೇರಿಲ್ಲ
ಉದ್ಧವ್ ಠಾಕ್ರೆ ಉದ್ಧಟತನದಿಂದ ಮಾತಾಡ್ತಾರೆ. ಅನಗತ್ಯವಾಗಿ ಕಾಲು ಕೆರೆದು ಮಾತನಾಡ್ತಾರೆ. ಅವರಿಗೆ ಯಾವುದೇ ಹಕ್ಕಿಲ್ಲ. ಮಹಾಜನ್ ವರದಿ ಮುಗಿದು ಹೋಗಿರೋ ಕಥೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದರಲ್ಲಿ ರಾಜಕಿಯ ಇದೆ. ಅವರ ಅಳಿವು ಉಳಿವು ಇದೆ. ಬೆಳಗಾವಿಯ ಒಂದಿಂಚೂ ಕೂಡ ಮಹಾರಾಷ್ಟ್ರಕ್ಕೆ ಸೇರೋದಿಲ್ಲ. ಇದನ್ನು ನಾವು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.
ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಅಂತಾ ಹೇಳಿದ್ರೆ ನನ್ನ ಮೇಲೆ ಬಿದ್ ಬಿಡ್ತಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರು ದೇಶಭಕ್ತರು. ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು ಎರಡು ಯುದ್ಧ ಗೆಲ್ಲಲಿಲ್ಲವಾ? ಇತಿಹಾಸವನ್ನು ನಮಗೆ ಬೇಕಾದಂಗೆ ಬರೆಯಬಾರದು. ಇತಿಹಾಸ ತಿರುಚಬಾರದು. ಇತಿಹಾಸದಿಂದ ಪಾಠ ಕಲಿಯಬೇಕು. ಯುದ್ಧ ಸೋತು ಮಕ್ಕಳನ್ನು ಅಡ ಇಟ್ಟ ರಾಜರನ್ನ ತೋರಿಸಿ ನೋಡೋಣ ಎಂದರು.
ನಾನು ಸಂಗೋಳ್ಳಿ ರಾಯಣ್ಣ ಸ್ಮಾರಕಕ್ಕೆ 262 ಕೋಟಿ ಅನುದಾನ ಕೊಟ್ಟಿದ್ದೆ. ಸಂಗೊಳ್ಳಿ ರಾಯಣ್ಣ ಕುರುಬ ಅಂತ ಅಲ್ಲ. ಸಂಗೋಳ್ಳಿ ರಾಯಣ್ಣ ಅಕಸ್ಮಿಕವಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದು. ನಾನು ಆಕಸ್ಮಿಕವಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದು. ನಾನೇನು ಕುರುಬರ ಜಾತಿಯಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿಕೊಂಡಿದ್ನಾ? ಯಾರಾದ್ರೂ ಅರ್ಜಿ ಹಾಕಿಕೊಂಡು ಹುಟ್ಟೋಕೆ ಆಗುತ್ತಾ? ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಮತ್ತಿತರರು ಉಪಸ್ಥಿರಿದ್ದರು.
ಇದನ್ನೂ ಓದಿ:ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿದ ಶಾಸಕ ಶರತ್ ಬಚ್ಚೇಗೌಡ