ಬೆಂಗಳೂರು:ಮುಷ್ಕರನಿರತ ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸುವ ಹಂತ ಬಂದಿಲ್ಲ. ಇಂದು, ನಾಳೆಯೊಳಗೆ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಂತೆ ಮಾತುಕತೆಗೆ ಸರ್ಕಾರ ಮುಂದಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಸಿಎಂ ಬುಲಾವ್ ಮೇರೆಗೆ ಆಗಮಿಸಿದ ಗೃಹ ಸಚಿವರು, ಸಾರಿಗೆ ಮುಷ್ಕರದ ಸ್ಥಿತಿಗತಿ ಕುರಿತು ವಿವರ ನೀಡಿದರು. ಹಂತ ಹಂತವಾಗಿ ಬಸ್ಗಳನ್ನು ರಸ್ತೆಗಳಿಸುವ ಪ್ರಯತ್ನ ನಡೆಸುತ್ತಿದ್ದು, ಪೊಲೀಸ್ ಭದ್ರತೆಯಲ್ಲಿ ಬಸ್ಗಳ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವ ಮಾಹಿತಿ ನೀಡಿದರು. ಎರಡು ಗಂಟೆಗಳ ಕಾಲ ಸಿಎಂ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಎಸ್ಮಾ ಜಾರಿ ಮಾಡುವ ಹಂತ ಬಂದಿಲ್ಲ, ಎಸ್ಮಾ ಜಾರಿ ಮಾಡುವ ವಿಚಾರವೂ ಸರ್ಕಾರದ ಮುಂದಿಲ್ಲ. ಸದ್ಯಕ್ಕೆ ನೌಕರರಿಗೂ ಕೂಡ ಸಾರ್ವಜನಿಕರ ಕಷ್ಟ ಗೊತ್ತಾಗಿದೆ, ಹೀಗಾಗಿ ಬಹುತೇಕ ಇಂದು ಅಥವಾ ನಾಳೆ ಈ ಸಮಸ್ಯೆ ಬಗೆಹರಿಯಲಿದೆ. ಮಾತುಕತೆಗೆ ಸಮಯ ನಿಗದಿ ಮಾಡುವುದು ದೊಡ್ಡ ವಿಷಯವೇನಲ್ಲ ಇಂದೇ ನೌಕರಿಗೆ ಹಾಜರಾಗುತ್ತೇವೆ ಎಂದು ಅವರು ಹೇಳಿದರೆ ಕೂಡಲೇ ಮಾತುಕತೆಗೆ ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನಿನ್ನೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೊದಲ ಹಂತವಾಗಿ ಅಧಿಕಾರಿಗಳ ಜೊತೆ ಮಾತನಾಡಿದ್ದರು. ಎರಡನೇ ಹಂತವಾಗಿ ಯೂನಿಯನ್ ನಾಯಕರ ಜೊತೆಯಲ್ಲಿ ಚರ್ಚೆ ಮಾಡಿದ್ದರು. ಸಂಜೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆಯಿಂದ ನಿರಂತರವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಲಕ್ಷ್ಮಣ ಸವದಿ ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಕೆಲ ಸೂಚನೆ ನೀಡಿದ್ದು ಅವುಗಳನ್ನು ಪಾಲಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಇದ್ದು ಸಮಸ್ಯೆಯನ್ನು ಪರಿಹಾರ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.