ಬೆಂಗಳೂರು:ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಮಾಡಿಸುವ ಮೂಲಕ ಮಾತ್ರ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ವ್ಯಾಕ್ಸಿನೇಷನ್ ಮೂಲಕ ಮಾತ್ರವೇ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಮಾಡಿಸುವ ಕಾರ್ಯ ಮಾಡಬೇಕು. ಮನೆ ಮನೆಗೆ ತೆರಳಿ ಯಾವ ರೀತಿ ಪೋಲಿಯೋ ಲಸಿಕೆ ಹಾಕಲಾಗಿದೆಯೋ, ಅದೇ ಮಾದರಿಯಲ್ಲಿ ಕೋವಿಡ್ ಲಸಿಕೆಯನ್ನೂ ಹಾಕಿಸಲು ಕ್ರಮ ಕೈಗೊಂಡಿದ್ದರೆ ಸಾವಿರಾರು ಜೀವಗಳನ್ನು ಉಳಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಹಿರಿಯ ನಾಯಕರು ಹಾಗೂ ಮುಖಂಡರು ಸೇರಿಕೊಂಡು ಜನರಿಗೆ ಒಳ್ಳೆಯದಾಗಬೇಕು ಎಂಬ ದೃಷ್ಟಿಯಿಂದ ಚಿಂತನೆ ನಡೆಸಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ಒಂದು ಕೋಟಿ ಹಣವನ್ನು ಸೇರಿಸಿ ಪಕ್ಷದ ವತಿಯಿಂದ 10 ಕೋಟಿ ರೂಪಾಯಿ ದೇಣಿಗೆ ನೀಡುವುದು ಸೇರಿದಂತೆ ಒಟ್ಟು 100 ಕೋಟಿ ರೂಪಾಯಿ ಅಂದಾಜು ಮೊತ್ತವನ್ನು ಸಂಗ್ರಹಿಸಿ ಉತ್ಪಾದಕರಿಂದ ವ್ಯಾಕ್ಸಿನ್ ಖರೀದಿಸಿ ಜನರಿಗೆ ಲಸಿಕಾಕರಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಇದನ್ನೂ ಓದಿ:ಮನೆ ಮನೆಗೆ ತೆರಳಿ ಸೋಂಕಿತರ ಉಸಿರಾಟ, ಉಷ್ಣತೆ ಪರೀಕ್ಷಿಸಲಿದ್ದಾರೆ ಆಶಾ ಕಾರ್ಯಕರ್ತೆಯರು
ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆ ಕೊಡಿಸುವ ಕಾರ್ಯಕ್ರಮವನ್ನು ನಮ್ಮ ಪಕ್ಷ ರೂಪಿಸಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಬೇಕಾಗಿದೆ. ಜನರ ಜೀವ ಅತ್ಯಂತ ಮುಖ್ಯ. ಇದರಲ್ಲಿ ರಾಜಕೀಯ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ವ್ಯಾಕ್ಸಿನೇಷನ್ ಮಾಡುವುದಕ್ಕೆ ಅವಕಾಶ ಮಾಡಿಕೊಡಿ. ಜನರ ಜೀವ ಉಳಿಸೋಣ. ಜೀವ ಇದ್ದರೆ ಜೀವನ ಹಾಗೂ ಜಗತ್ತು. ಜನರಿಗೆ ರಕ್ಷಣೆ ನೀಡೋಣ ಹಾಗೂ ಕೋವಿಡ್ ಸೋಲಿಸೋಣ ಎಂದಿದ್ದಾರೆ.