ಬೆಂಗಳೂರು: ಉದ್ಯಮಿ ಹಾಗೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕೆಜಿಎಫ್ ಬಾಬುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಚುನಾವಣಾ ಅಕ್ರಮ ಶಂಕೆ ಮೇರೆಗೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ವೇಳೆ ಸೀರೆ ಡಿ.ಡಿ. ಜೊತೆಗೆ ಮತದಾರರ ಗುರುತಿನ ಚೀಟಿ ಪತ್ತೆಯಾಗಿವೆ. ಮೆಲ್ನೋಟಕ್ಕೆ ಅಕ್ರಮ ಎಸಗಿರುವುದು ಕಂಡು ಬಂದ ಹಿನ್ನೆಲೆ ಬಾಬು ವಿರುದ್ದ ಎನ್ಸಿಆರ್ ದಾಖಲಾಗಿದ್ದು, ನ್ಯಾಯಾಲಯದಿಂದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲು ಹೈಗ್ರೌಂಡ್ಸ್ ಪೊಲೀಸರು ಸಿದ್ದತೆ ನಡೆಸಿಕೊಂಡಿದ್ದಾರೆ.
ವಸಂತನಗರದಲ್ಲಿರುವ ರುಕ್ಸಾನ ಪ್ಯಾಲೇಸ್ನಲ್ಲಿರುವ ಕೆಜಿಎಫ್ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಐಟಿ ದಾಳಿ ನಡೆಸಿದ್ದರು. ಶೋಧ ಕಾರ್ಯಾಚರಣೆ ವೇಳೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿವೆ. 1,925 ಚೆಕ್ಗಳ ಜೊತೆಯಲ್ಲಿ ಮತದಾರರ ಚೀಟಿಗಳು, ಎಚ್ಡಿಎಫ್ಸಿ ಬ್ಯಾಂಕ್ ಅಕೌಂಟ್ನ 50200060873761 ನಂಬರಿನ ಚೆಕ್ಗಳು ಪತ್ತೆಯಾಗಿವೆ. ಅಲ್ಲದೇ ಚೆಕ್ಗಳ ಜೊತೆ ವೋಟರ್ ಐಡಿ ಅಟ್ಯಾಚ್ ಮಾಡಿ ಇರಿಸಲಾಗಿತ್ತು. ಪ್ರತಿ ಚೆಕ್ನಲ್ಲಿ 5000 ರೂ ನಮೂದು ಮಾಡಲಾಗಿದೆ.
ಇನ್ನು ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್ಗಳಲ್ಲಿದ್ದ ಸೀರೆ, ಚಿಕ್ಕಪೇಟೆಗೆ ಸಂಬಂಧಿಸಿದ ಮುದ್ರಣ ಪ್ರತಿಗಳು, ವ್ಯಾನ್ ಹುಸೇನ್ ಕಂಪನಿಯ 481 ಸೂಟ್ಗಳು ದೊರಕಿವೆ. ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಹಿನ್ನೆಲೆ ಶಿವಾಜಿನಗರ ವಲಯದ ಚುನಾವಣಾ ಉಸ್ತುವಾರಿಯಿಂದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಕೆಜಿಎಫ್ ಬಾಬು ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದ್ದು, ಇಂದು ಕೋರ್ಟ್ ಪರ್ಮೀಷನ್ ಪಡೆದು ಪೊಲೀಸರು ಎಫ್ ಐ ಆರ್ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.