ಬೆಂಗಳೂರು : ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಿರುವ ಚುನಾವಣಾ ಆಯೋಗವು ಬುಧವಾರ ಒಂದೇ ದಿನದಲ್ಲಿ 2.85 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 89.01 ಲಕ್ಷ ರೂ. ನಗದು, ತೇರದಾಳ ಕ್ಷೇತ್ರದಲ್ಲಿ 70 ಲಕ್ಷ ರೂ. ಮತ್ತು ತುರುವೇಕೆರೆ ಕ್ಷೇತ್ರದಲ್ಲಿ 31.88 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ 3.94 ಕೋಟಿ ರೂ. ಮೌಲ್ಯದ 7.881 ಕೆಜಿ ಚಿನ್ನ, 2.22 ಕೋಟಿ ರೂ. ಮೌಲ್ಯದ 3.993 ಕೆಜಿ ಕಚ್ಚಾ ಚಿನ್ನ , 6.48 ಲಕ್ಷ ರು. ಮೌಲ್ಯದ 735 ಗ್ರಾಂ ವಜ್ರ ಲೇಪಿತ ಚಿನ್ನ ಮತ್ತು 6.39 ಲಕ್ಷ ರೂ.ಮೌಲ್ಯದ 10.887 ಕೆಜಿ ಕಚ್ಚಾ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಆದ ಬಳಿಕ ಈವರೆಗೆ ಒಟ್ಟು 115.96 ಕೋಟಿ ರೂ. ನಗದು, 22.36 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ.
76.07 ಕೋಟಿ ರೂ. ಮೌಲ್ಯದ 20.29 ಲಕ್ಷ ಲೀಟರ್ ಮದ್ಯ, 21.37 ಕೋಟಿ ರೂ. ಮೌಲ್ಯದ 1,689 ಕೆಜಿ ಮಾದಕ ವಸ್ತುಗಳು, 82.77 ಕೋಟಿ ರೂ. ಮೌಲ್ಯದ 162.26 ಕೆಜಿ ಚಿನ್ನ, 4.54 ಕೋಟಿ ರೂ. ಮೌಲ್ಯದ 656.13 ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು 87.32 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 323.09 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.