ಬೆಂಗಳೂರು: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಚುನಾವಣೆಯ ಮಾದರಿ ನೀತಿ ಸಂಹಿತಿಯು ಮಾರ್ಚ್ 29 ರಿಂದ ಜಾರಿಯಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮ, ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಸಿ.ವಿ. ರಾಮನ್ ನಗರ ವ್ಯಾಪ್ತಿಯ ಬಾಗ್‌ಮಾನೆ ಟೆಕ್ ಪಾರ್ಕ್ ನಲ್ಲಿ ಮತದಾನ ಜಾಗೃತಿ:ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬಾಗ್‌ಮಾನೆ ಟೆಕ್ ಪಾರ್ಕ್ನಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ವಲಯ ಆಯುಕ್ತ ಪಿ.ಎನ್ ರವೀಂದ್ರ ಮಾತನಾಡಿ, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ-10ರಂದು ನಡೆಯಲಿದ್ದು, ಚುನಾವಣಾ ಆಯೋಗ ಮತದಾನದ ದಿನದಂದು ಖಾಸಗಿ ಸ್ವಾಮ್ಯದ ಐ.ಟಿ./ಬಿ.ಟಿ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಿದೆ. ಈ ಸಂಬಂಧ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ತಾವೆಲ್ಲರೂ, ತಮ್ಮ ಕುಟುಂಬದ ಸದಸ್ಯರು ಹಾಗೂ ಅಕ್ಕ ಪಕ್ಕದ ನಿವಾಸಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ, ಮತದಾನದ ಕೇಂದ್ರಕ್ಕೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಪೂರ್ವ ವಲಯದ ಜಂಟಿ ಆಯುಕ್ತ ಪಲ್ಲವಿ, ಉಪ ಆಯುಕ್ತ ಎನ್. ಶ್ರೀನಿವಾಸ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು, ನೌಕರರುಗಳು ಭಾಗವಹಿಸಿದ್ದರು.
ಪದ್ಮನಾಭನಗರದಲ್ಲಿ ಜಾಗೃತಿ ಕಾರ್ಯಕ್ರಮ:ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬನಶಂಕರಿ ಮತಗಟ್ಟೆಯ ಪ್ರದೇಶದಲ್ಲಿ ವಾಸವಿರುವ ಮತದಾರರಿಗೆ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಗಳೊಂದಿಗೆ ಜಾಗೃತಿ ಜಾಥಾದ ಮೂಲಕ ಸಾರ್ವಜನಿಕರು ಹಾಗೂ ಯುವ ಮತದಾರರು ತಪ್ಪದೇ ಮತ ಚಲಾಯಿಸಬೇಕೆಂದು ಅರಿವು ಮೂಡಿಸಲಾಯಿತು. ಈ ವೇಳೆ ಚುನಾವಣಾಧಿಕಾರಿ ಜಿ.ಆರ್. ಹರಿಶಿಲ್ಪ , ಎಂಸಿಸಿ ನೋಡಲ್ ಅಧಿಕಾರಿಯಾದ ನಾಗಪ್ರಶಾಂತ್, ಮತದಾರರ ಪಟ್ಟಿ ನೋಂದಣಾಧಿಕಾರಿ ಕೆ ನಾಗರಾಜ್, ಸಹಾಯಕ ಮತದಾರರ ಪಟ್ಟಿ ನೋಂದಣಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.