ಬೆಂಗಳೂರು :ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯವಿರುವುದರಿಂದ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್ ಕಲಿಕೆ ಪರಿಹಾರ. ಹಾಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಕಲಿಕೆಗೆ ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಉನ್ನತ ಶಿಕ್ಷಣದ ಡಿಜಿಟಿಲೀಕರಣ-ಸವಾಲು ಮತ್ತು ಅವಕಾಶಗಳ ಕುರಿತು ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಯಾವುದೇ ವರ್ಗ, ಸ್ಥಳ, ಜನಾಂಗದ ಬೇಧವಿಲ್ಲದೇ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಇರುವ ಮಾರ್ಗವೇ ಡಿಜಿಟಲ್ ಕಲಿಕೆ. ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಇದು ಪರಿಹಾರವೂ ಆಗಿದ್ದು, ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಹ ಡಿಜಿಟಲ್ ವ್ಯವಸ್ಥೆ ಮೂಲಕ ನುರಿತ ಉಪನ್ಯಾಸಕರ ಪಾಠ ಕೇಳಲು ಅವಕಾಶ ಒದಗಿದೆ.
ಜೊತೆಗೆ ಪಠ್ಯ ವಿಷಯಗಳ ಲಿಖಿತ ಮಾಹಿತಿಯೂ ಅವರ ಕೈ ಸೇರುತ್ತಿರುವುದಿಂದ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳು ಸಮಯ ವ್ಯರ್ಥ ಮಾಡದೆ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಅಲ್ಲದೇ ಡಿಜಿಟಲ್ ಕಲಿಕೆಗೆ ಸವಾಲುಗಳಿದ್ದು, ಅದನ್ನು ಪರಿಣಾಮಕಾರಿಯಾಗಿ ಎದುರಿಸುವ ಕೆಲಸವೂ ಆಗುತ್ತಿದೆ. ಇಂಟರ್ನೆಟ್ ಸಂಪರ್ಕ ಹಾಗೂ ಮೊಬೈಲ್, ಲ್ಯಾಪ್‌ಟಾಪ್‌ನಂಥ ಗ್ಯಾಡ್ಜೆಟ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ.