ಕರ್ನಾಟಕ

karnataka

ETV Bharat / state

ಪ್ರತಿಷ್ಠೆಗೋಸ್ಕರ ಅಲ್ಲ, ಕರ್ತವ್ಯಕ್ಕಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ: ಸುರಕ್ಷತೆಗೆ ಆದ್ಯತೆ ಎಂದ ಸಚಿವ ಸುರೇಶ್​ ಕುಮಾರ್​!

ನಾಳೆಯಿಂದ ರಾಜ್ಯಾದ್ಯಂತ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಶಿಕ್ಷಣ ಸಚಿವ ಸುರೇಶ್​​ ಕುಮಾರ್​ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದರು.

By

Published : Jun 24, 2020, 6:33 PM IST

Updated : Jun 24, 2020, 6:46 PM IST

Education minister Suresh kumar
Education minister Suresh kumar

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಇದನ್ನು ಪ್ರತಿಷ್ಠೆಗೋಸ್ಕರ ನಡೆಸುತ್ತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕ ಇಲಾಖೆಗಳ ಜತೆ ಸಮಾಲೋಚನೆ ನಡೆಸಿ ಚರ್ಚಿಸಿ ಅಗತ್ಯ ಸುರಕ್ಷತಾ ‌ಕ್ರಮ ಕೈಗೊಂಡು ಪರೀಕ್ಷೆ ನಡೆಸುತ್ತಿದ್ದೇವೆ. ಹೈಕೋರ್ಟ್, ಸುಪ್ರೀಂಕೋರ್ಟ್ ಪರೀಕ್ಷೆ ನಡೆಸಲು ಅವಕಾಶ ನೀಡಿವೆ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಪರೀಕ್ಷೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಅತ್ಯಂತ ಪ್ರಮುಖವಾಗಿದೆ. ಉಳಿದ ರಾಜ್ಯಗಳಿಗೆ ಪಿಯುಸಿ ಮುಖ್ಯವಾಗಿದ್ದು, ಇದರಿಂದ ಅವರು ಪರೀಕ್ಷೆ ಕೈಬಿಟ್ಟಿದ್ದಾರೆ. ಆದರೆ ನಮಗೆ ಅದು ಆಗದು. ಸೂಕ್ತ ಎಚ್ಚರಿಕೆ ವಹಿಸಿ ಕ್ರಮ ಕೈಗೊಂಡಿದ್ದೇವೆ ಎಂದರು.

ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸುದ್ದಿಗೋಷ್ಠಿ

ಪರೀಕ್ಷೆ ಬರೆಯುವ ಮಧ್ಯೆ ಯಾವುದೇ ಮಗು ಕೋವಿಡ್-19ಗೆ ತುತ್ತಾದರೆ ಆ ಮಗುವಿಗೆ ಆಗಸ್ಟ್​​ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಮಾಡಿಕೊಡುತ್ತೇವೆ. ಈ ಸಲದ ಪರೀಕ್ಷೆಯಲ್ಲಿ ಮುಂದುವರಿಸಲು ಅವಕಾಶ ಇರಲ್ಲ. ಸೂಕ್ತ ಗಮನ ಹರಿಸುತ್ತೇವೆ. ರಾಜ್ಯದಲ್ಲಿ 5,765 ಆರೋಗ್ಯ ತಪಾಸಣಾ ಕೇಂದ್ರ ಆರಂಭಿಸಿದ್ದೇವೆ ಎಂದರು.

ಪರೀಕ್ಷೆ ಬರೆಯಲಿದ್ದಾರೆ 8,48,203 ಮಕ್ಕಳು

8,48,203 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. 81,265 ಅಧಿಕಾರಿಗಳು, ಸಿಬ್ಬಂದಿ ಜತೆಗೆ ಗೃಹ ಇಲಾಖೆ, ಪೊಲೀಸ್, ನಮ್ಮ ಸಿಬ್ಬಂದಿ ಸೇರಿ 1.5 ಲಕ್ಷ ಜನರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಬೆಳಗ್ಗೆ 7ರಿಂದಲೇ ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಇರುತ್ತಾರೆ. ಮೊದಲೇ ಮಕ್ಕಳು ಬರಬಹುದು. ನೂಕುನುಗ್ಗಲಾಗದು. ಕುಡಿಯುವ ನೀರನ್ನು ಮಕ್ಕಳಿಗೆ ಮನೆಯಿಂದ ತರಲು ಹೇಳಿದ್ದೇವೆ. ತರದಿದ್ದವರಿಗೆ 250 ಎಂಎಲ್​ ನೀರಿನ ಬಾಟಲಿ ಕೊಡುತ್ತೇವೆ. ಪಾಲಕರು ಮಕ್ಕಳನ್ನು ಬಿಡಲು ಬಂದವರು ‌ನೂಕುನುಗ್ಗಲಾಗದಂತೆ ನೋಡಿಕೊಳ್ಳಿ. ಅನಗತ್ಯ ಒತ್ತಡ ಬೇಡ ಎಂದರು.

ಸುರಕ್ಷತೆಗೆ ಮೊದಲ ಆದ್ಯತೆ ಎಂದ ಸಚಿವ ಸುರೇಶ್​ ಕುಮಾರ್​!

ಕಂಟೈನ್ಮೆಂಟ್ ಝೋನ್​ನಿಂದ ರಾಜ್ಯದಲ್ಲಿ‌ 26 ಕೇಂದ್ರ ಬದಲಿಸಿದ್ದೇವೆ. ಕೊರೊನಾ ಸೂಚನೆ ಹೊಂದಿರುವ 10 ಮಕ್ಕಳನ್ನು ಹೊರಗಿಟ್ಟಿದ್ದೇವೆ. ಅವರಿಗೆ ಆಗಸ್ಟ್​ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುತ್ತೇವೆ. ಕಂಟೈನ್ಮೆಂಟ್ ಝೋನ್​ನಿಂದ ಸುಮಾರು‌ 9 ಮಕ್ಕಳು‌ ಬರುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಕೊಠಡಿ ಮಾಡಿಕೊಟ್ಟಿದ್ದೇವೆ. ಮಾಸ್ಕ್ ನಾವೇ ನೀಡುತ್ತೇವೆ. ಎನ್-95 ಮಾಸ್ಕ್ ನೀಡುತ್ತೇವೆ. ಶಿಕ್ಷಣ ಇಲಾಖೆ ಜತೆ ಗೃಹ ಇಲಾಖೆ, ಆರೋಗ್ಯ, ಕಂದಾಯ, ಸಾರಿಗೆ, ನಗರಾಭಿವೃದ್ಧಿ ಇಲಾಖೆಗಳೂ ಸಹಕಾರ ನೀಡುತ್ತಿವೆ ಎಂದು ಹೇಳಿದರು.

ಪರೀಕ್ಷಾ ಹಾಲ್​ ಸ್ಯಾನಿಟೈಸ್​​

ಆರೋಗ್ಯ ಇಲಾಖೆಯಿಂದ ಎಲ್ಲಾ ಕೊಠಡಿ ಸ್ಯಾನಿಟೈಸ್​​ ಮಾಡಿದ್ದು, ಪರೀಕ್ಷೆ ಮುಗಿದ ಮೇಲೆ ಮತ್ತೆ ಮಾಡುತ್ತೇವೆ. ಪರೀಕ್ಷಾ ಕೇಂದ್ರದ ಸಮೀಪದ ಝೆರಾಕ್ಸ್, ಕಂಪ್ಯೂಟರ್, ಸ್ಕ್ಯಾನಿಂಗ್ ಸೆಂಟರ್ ಬಂದ್ ಮಾಡಲಾಗುತ್ತದೆ. ಸಾರಿಗೆ ವಿಚಾರದಲ್ಲಿ ಗಮನ ಹರಿಸಿದ್ದೇವೆ. ಕಟ್ಟ ಕಡೆಯ ಮಗು‌ ಕೂಡ ಪರೀಕ್ಷಾ ಕೇಂದ್ರ ತಲುಪಲು ಗುತ್ತಿಗೆ ಆಧಾರದ ಮೇಲೆ ಬಸ್ ಇರಲಿದೆ. ಉಳಿದ ಬಸ್​​ಗಳಿಗೆ ಹಾಲ್ ಟಿಕೆಟ್ ತೋರಿಸಿದರೆ ಉಚಿತ ಸಾರಿಗೆ ಇರಲಿದೆ. ಗಡಿ ಭಾಗದಲ್ಲಿ ಅನ್ಯ ರಾಜ್ಯದ ಮಕ್ಕಳಿಗೂ ಉಚಿತ ಸಂಚಾರಕ್ಕೆ ಅವಕಾಶ ಮಾಡಿದ್ದೇವೆ ಎಂದರು.

ಮಾಸ್ಕ್​ ಕಡ್ಡಾಯ, ಸೆಕ್ಷನ್​ 144 ಜಾರಿ

ಸೂಕ್ತ ಎಚ್ಚರಿಕೆ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಲಾಖೆ ಪಾತ್ರ ಬಹಳ ಮಹತ್ವದ್ದಾಗಿದೆ. ಪೊಲೀಸ್ ಭದ್ರತೆಯಲ್ಲೇ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಪರೀಕ್ಷೆ ಅಕ್ರಮ ತಡೆಯುವುದೂ ಇತ್ತು. ಜತೆಗೆ ಪ್ರಶ್ನೆ, ಉತ್ತರ ಪತ್ರಿಕೆ ಸುರಕ್ಷಿತವಾಗಿ ಇಡುವುದಿತ್ತು. ಈ ಸಾರಿ ಹೆಚ್ಚುವರಿಯಾಗಿ ಪ್ರವೇಶ ದ್ವಾರದಲ್ಲಿ‌ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುವುದು. ಮಕ್ಕಳ ನೂಕುನುಗ್ಗಲು ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಮಾಸ್ಕ್ ಕಡ್ಡಾಯವಾಗಿದೆ. 144 ಸೆಕ್ಷನ್ ಜಾರಿಗೆ ತರಲಾಗಿದೆ. ಎಲ್ಲಾ ಕೇಂದ್ರಕ್ಕೂ ಜಿಲ್ಲಾ ಪೊಲೀಸ್ ಅಧಿಕ್ಷಕರು 30, ಕೇಂದ್ರದಲ್ಲಿ 5758 ಪೊಲೀಸರು ಇರುತ್ತಾರೆ. ಇನ್ನುಳಿದ 1,246 ಮಂದಿ ಪೊಲೀಸರು ಪರೀಕ್ಷಾ ಪತ್ರಿಕೆಗಳ ಮೇಲೆ ನಿಗಾ ಇಡಲಿದ್ದಾರೆ. 5 ಸಾವಿರ ಹೋಂ ಗಾರ್ಡ್ ಬರುತ್ತಾರೆ. ಎಲ್ಲರನ್ನು ಮಕ್ಕಳ ಸುರಕ್ಷತೆಗೆ ತೊಡಗಿಸಿಕೊಂಡಿದ್ದೇವೆ. ಮಕ್ಕಳು, ಪಾಲಕರ ಸುರಕ್ಷತೆ ಮುಖ್ಯ ಎಂದರು.

ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಲೀಕ್​​ ಆಗಿಲ್ಲ

ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನಲಾಗಿತ್ತು. ಆದರೆ ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಪ್ರಿಪರೇಟರಿ ಪರೀಕ್ಷೆಯ ಪತ್ರಿಕೆ ಇದಾಗಿದ್ದು, ಅದರ ಪ್ರತಿ ಫೇಸ್​ಬುಕ್​​ನಲ್ಲಿ ಲೀಕ್​ ಮಾಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Last Updated : Jun 24, 2020, 6:46 PM IST

ABOUT THE AUTHOR

...view details