ಕರ್ನಾಟಕ

karnataka

ETV Bharat / state

ಕೊರೊನಾ ಪರೀಕ್ಷಾ ವರದಿ ಇನ್ಮುಂದೆ 24 ಗಂಟೆಯೊಳಗೆ ಬರುತ್ತೆ: ಸಚಿವ ಸುಧಾಕರ್​​​ - Covid late report

ಇನ್ಮುಂದೆ 24 ಗಂಟೆಯೊಳಗೆ ಕೊರೊನಾ ಪರೀಕ್ಷಾ ವರದಿ ಬರುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

Sudhakar
Sudhakar

By

Published : Jul 16, 2020, 3:09 PM IST

ಬೆಂಗಳೂರು: ಕೊರೊನಾ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವುದು ನಿಜ. ಇನ್ಮುಂದೆ 24 ಗಂಟೆಯೊಳಗೆ ವರದಿ ಬರುವಂತೆ ತಿಳಿಸಲಾಗಿದ್ದು, ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿನ್ನೆ 22 ಸಾವಿರ ಪರೀಕ್ಷೆ ಮಾಡಲಾಗಿದೆ. ಇನ್ನೆರಡು ವಾರದಲ್ಲಿ ಸಾಮರ್ಥ್ಯವನ್ನು 30 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಪೂರ್ವ ನಿಯೋಜನೆ ಸಭೆಗಳನ್ನು ಮಾಡಿದ್ದೇವೆ. 50 ಲ್ಯಾಬ್, 25 ವೈದ್ಯಕೀಯ ಕಾಲೇಜು, 25 ಸರ್ಕಾರಿ ಹಾಗೂ ಖಾಸಗಿ ಲ್ಯಾಬ್​​ಗಳ ಜೊತೆ ಮಾತನಾಡಲಾಗಿದೆ. ನಿನ್ನೆ ಸಭೆಗೆ ಬಂದವರ ಜೊತೆ ಇಂದು ಮಧ್ಯಾಹ್ನ ಮತ್ತೆ ಸಭೆ ನಡೆಸಲಾಗುತ್ತದೆ ಎಂದರು.

ಕೊರೊನಾ ಪರೀಕ್ಷಾ ವರದಿ ವಿಳಂಬವಾಗಿ ಬರುತ್ತಿದೆ. ಸ್ಯಾಂಪಲ್ ಸಂಗ್ರಹ ಹೆಚ್ಚು ಸಂಖ್ಯೆಯಲ್ಲಿದೆ. ಲ್ಯಾಬ್​​ಗಳಲ್ಲಿ ಟೆಸ್ಟ್ ಮಾಡುವ ಸಾಮರ್ಥ್ಯಕ್ಕಿಂತ ಹೆಚ್ಚು ಸ್ಯಾಂಪಲ್​​ಗಳು ಬರುತ್ತಿವೆ. ಹೀಗಾಗಿ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಸಾಕಷ್ಟು ಜನರಿಗೆ ಪಾಸಿಟಿವ್ ಇದ್ದರೂ ನೆಗೆಟಿವ್ ರಿಪೋರ್ಟ್ ಕೊಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಆರ್​ಟಿಪಿಸಿಆರ್ ಪರೀಕ್ಷೆಯಲ್ಕಿ ಈ ರೀತಿ ಆಗಿರುವುದಿಲ್ಲ. ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಕೆಲವೊಮ್ಮೆ ಪಾಸಿಟಿವ್ ಇದ್ದವರಿಗೆ ನೆಗೆಟಿವ್ ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಪಾಸಿಟಿವ್ ತೋರಿಸಿದರೆ ರೋಗದ ಲಕ್ಷಣ ಹೆಚ್ಚಾಗಿರುತ್ತದೆ. ನೆಗೆಟಿವ್ ರಿಪೋರ್ಟ್ ಬಂದು ಅವರಿಗೆ ರೋಗದ ಲಕ್ಷಣವಿದ್ದರೆ ಅಂತವರನ್ನು ಆರ್​​ಟಿಪಿಸಿಆರ್ ಟೆಸ್ಟ್​​​ಗೆ ಒಳಪಡಿಸಲಾಗುತ್ತದೆ ಎಂದರು.

ಪ್ಲಾಸ್ಮಾ ದಾನಿಗಳಿಗೆ ಸರ್ಕಾರದ ವತಿಯಿಂದ 5000 ಪ್ರೋತ್ಸಾಹಧನ ಘೋಷಿಸಿದ್ದೇವೆ. ಪ್ಲಾಸ್ಮಾ ಚಿಕಿತ್ಸೆಗೆ ನೈತಿಕವಾಗಿ ಸ್ಫೂರ್ತಿ ನೀಡಿ ಎಂದು ದಾನಿಗಳಿಗೆ ಮನವಿ ಮಾಡಿದ್ದೇವೆ. ಸರ್ಕಾರ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದೆ. ಆದ್ದರಿಂದ ನೈತಿಕತೆಯನ್ನು ಅರಿತು, ಅನುಕಂಪ ಹಾಗೂ ಪ್ರೀತಿಯ ಸಂಕೇತವಾಗಿ ರೋಗಿಗಳಿಗೆ ಪ್ಲಾಸ್ಮಾ ರಕ್ತವನ್ನು ದಾನ ಮಾಡಬೇಕು. ಬೇರೆ ಸೋಂಕಿತರ ರೋಗವನ್ನು ಸೋಂಕು ಮುಕ್ತ ಮಾಡುವ ಅವಕಾಶ ನಿಮಗಿದೆ ಎಂದು ಮಾಧ್ಯಮಗಳ ಮೂಲಕ ಅವರಿಗೆ ಮತ್ತೊಮ್ಮೆ ಮನವಿ ಮಾಡಿದರು.

ಲಾಕ್​​ಡೌನ್​​ಗೆ ಜನ ಕೇರ್ ಮಾಡದಿರುವುದಕ್ಕೆ ಸಚಿವ ಸುಧಾಕರ್ ಬೇಸರ ವ್ಯಕ್ತಪಡಿಸಿದರು. ಸರ್ಕಾರಕ್ಕಿಂತ ಜನರು ತೀರ್ಮಾನ ಮಾಡಬೇಕು. ಲಾಕ್​​ಡೌನ್ ಮಾಡಿರುವುದು ಯಾಕೆ ಎಂದು ಅವರೇ ಅರ್ಥಮಾಡಿಕೊಳ್ಳಬೇಕು?, ಸೋಂಕು ಕಡಿಮೆಯಾಗಬೇಕು ಅಥವಾ ಹೆಚ್ಚಾಗಬೇಕು ಎಂದು ನಿರ್ಧರಿಸುವುದು ಜನರ ಕೈಯಲ್ಲಿದೆ. ಜನರು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಸರ್ಕಾರದ ಕೇವಲವೊಂದು ಮಾರ್ಗಸೂಚಿಯಿಂದ ನಿಯಂತ್ರಣ ಮಾಡುವ ಕಾಯಿಲೆ ಇದಲ್ಲ. ಜನರು ಮತ್ತು ಸರ್ಕಾರದ ಸಹಕಾರದಿಂದ ಮಾತ್ರ ಕೊರೊನಾ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯ ಎಂದರು.

ABOUT THE AUTHOR

...view details