ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ನಮ್ಮ ರಾಜ್ಯ ದೇಶದಲ್ಲೇ ಅತ್ಯುತ್ತಮ ಮುಂಜಾಗೃತಾ ಕ್ರಮ ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವಿಧಾನಸಭಾ ಕಲಾಪದ ವೇಳೆ ಸ್ಪಷ್ಟಪಡಿಸಿದರು.
ಕಲಾಪದ ಶೂನ್ಯ ವೇಳೆಯಲ್ಲಿ ಕೊರೊನಾ ವೈರಸ್ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಎಲ್ಲಾ ರಾಜ್ಯಗಳಿಗಿಂತ ಮೊದಲೇ ನಾವು ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡಿದ್ದೇವೆ. ವೈರಸ್ ನಿಯಂತ್ರಣ ಸಂಬಂಧ ಹಣಕಾಸಿನ ಯಾವುದೇ ಕೊರತೆ ಇಲ್ಲ. ಈ ವೈರಾಣು ಹರಡದಂತೆ ಏನೆಲ್ಲಾ ಕ್ರಮಕೈಗೊಳ್ಳ ಬೇಕೋ ಅದನ್ನು ಕೈಗೊಳ್ಳಿ ಎಂದು ಸಿಎಂ ಕೂಡ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.
ಕೊರೊನಾ ಕುರಿತ ಚರ್ಚೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್.. ಎಲ್ಲ ಜನರೂ ಮಾಸ್ಕ ಧರಿಸುವ ಅಗತ್ಯವಿಲ್ಲ. ತೀವ್ರವಾದ ಜ್ವರ, ಕೆಮ್ಮು ನೆಗಡಿ ಈ ರೋಗದ ಲಕ್ಷಣಗಳು ಕಂಡು ಬಂದವರು ಮಾತ್ರ ಮಾಸ್ಕ್ ಧರಿಸಲಿ. ಹ್ಯಾಂಡ್ ಶೇಕ್ ಮಾಡುವಾಗ ಕೈಯಲ್ಲಿ ಬೆವರು ಇರುತ್ತದೆ. ಹಾಗಾಗಿ ಹ್ಯಾಂಡ್ ಶೇಕ್ ಬೇಡ. ಪ್ರಧಾನಿಯವರು ಹೇಳಿರುವ ಹಾಗೆ ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ಕರಿಸೋಣ ಎಂದರು. ಹೆಚ್ಚಿನ ಜನ ಸೇರುವ ಸಭೆ, ಸಮಾರಂಭಗಳ ಆಯೋಜನೆ ಬೇಡ. ಯಾರಿಗೆ ಈ ವೈರಾಣು ತಗುಲಿರುತ್ತದೋ ಅವರಿಗೆ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಎನ್95 ಮಾಸ್ಕ್ ಅಗತ್ಯವಿದೆ. ಆರು ತಿಂಗಳಿಗೆ ಅಗತ್ಯ ಇರುವಷ್ಟು ಮಾಸ್ಕ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯ ಬೆಂಗಳೂರಿನಲ್ಲಿ ವಿಕ್ಟೋರಿಯಾ, ನಿಮಾನ್ಸ್ ಹಾಗೂ ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆ ಕೇಂದ್ರ ಇದೆ. ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ 15 ದಿನಗಳಲ್ಲಿ ಹಾಸನ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಬಳ್ಳಾರಿಯಲ್ಲಿ ವಲಯವಾರು ತಪಾಸಣೆ ಮಾಡಲು ಲ್ಯಾಬ್ ಪ್ರಾರಂಭಿಸಲಾಗುವುದು ಎಂದರು. ಮುಂಜಾಗೃತಾ ಕ್ರಮವಾಗಿ ಈ ತಿಂಗಳ ಅಂತ್ಯದವರೆಗೆ ಎಲ್‌ಕೆಜಿ ಹಾಗೂ ಯುಕೆಜಿ ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.