ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅಪರಿಚಿತ ಹಂತಕರು ವೃದ್ಧ ದಂಪತಿಯನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ತಿವಿದು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆ. ಎಸ್ ಲೇಔಟ್ನ ಕಾಶಿನಗರದಲ್ಲಿ ವಾಸವಾಗಿದ್ದ ಶಾಂತರಾಜು (65) ಹಾಗೂ ಪ್ರೇಮಲತಾ (62) ಕೊಲೆಯಾದ ದಂಪತಿಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಶಾಂತರಾಜು, ಐದು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಕಾಶಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದ ಶಾಂತರಾಜು ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಮನೆಯಲ್ಲಿನ ಇತರ ಎರಡು ರೂಂಗಳನ್ನು ಬಾಡಿಗೆಗೆ ನೀಡಿದ್ದರು. ಬಾಡಿಗೆಯಿಂದ ಬಂದ ಹಣದಿಂದಲೇ ಜೀವನ ನಡೆಸುತ್ತಿದ್ದರು. ಇಂದು ಮಧ್ಯಾಹ್ನದವರೆಗೂ ನೆರೆಹೊರೆ ಮನೆಯವರೊಂದಿಗೆ ಮಾತನಾಡಿದ್ದರು. ಮಧ್ಯಾಹ್ನದ ಬಳಿಕ ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆ ಸಂಗತಿ ಬೆಳಕಿಗೆ ಬಂದಿದೆ.
ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ:
ಪ್ರಾಥಮಿಕ ತನಿಖೆಯಲ್ಲಿ ಪರಿಚಯಸ್ಥರೇ ದಂಪತಿಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಮನೆಗೆ ಬಂದಿದ್ದ ಆಗಂತುಕರು ಕೆಲ ಹೊತ್ತು ಕಾಲ ಕಳೆದಿದ್ದಾರೆ. ಇದಕ್ಕೆ ಪೂರಕವಾಗಿ ಸಾವಿನ ಮನೆಯ ಟೇಬಲ್ನಲ್ಲಿ ಮೂವರು ಚಹಾ ಕುಡಿದಿರುವ ಲೋಟ ಇರುವುದು ಪತ್ತೆಯಾಗಿದೆ. ಬಲವಂತವಾಗಿ ಮನೆಗೆ ನುಗ್ಗಿ ಬರದಿರುವುದು ತನಿಖೆಯಲ್ಲಿ ಕಂಡುಕೊಂಡಿರುವ ಪೊಲೀಸರು ಮೇಲ್ನೋಟಕ್ಕೆ ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಾಕುವಿನಿಂದ ಚುಚ್ಚಿ ದಿಂಬಿನಿಂದ ಸಾಯಿಸಿದ ಹಂತಕರು:
ಪೂರ್ವ ಸಂಚಿನಂತೆ ಆಗಮಿಸಿದ್ದ ಹಂತಕರು ಶಾಂತರಾಜುನನ್ನು ಚಾಕುವಿನಿಂದ ಚುಚ್ಚಿ, ದಿಂಬಿನಿಂದ ಉಸಿರುಗಟ್ಟಿ ಸಾಯಿಸಿದ್ದರೆ, ಮತ್ತೊಂದು ಕೊಠಡಿಯಲ್ಲಿ ಪ್ರೇಮಲತಾರನ್ನು ಕೇಬಲ್ ವೈರ್ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಕೇಬಲ್ ವೈರ್ ಪತ್ತೆಯಾಗಿದೆ. ಸ್ಥಳೀಯ ಪೊಲೀಸರು ಮನೆ ಸುತ್ತಮುತ್ತಲು ಹಂತಕರು ಬಂದು ಹೋಗಿರುವುದನ್ನು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಯ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.