ಆನೇಕಲ್ : ಕರ್ನಾಟಕ - ತಮಿಳುನಾಡು ಗಡಿ ಅತ್ತಿಬೆಲೆ - ಟಿವಿಎಸ್ ಮುಖ್ಯರಸ್ತೆಗೆ ಹೊಂದಿಕೊಂಡ ಅರೆಹಳ್ಳಿ ರಸ್ತೆ ಪಕ್ಕದ ಬಯಲಿನಲ್ಲಿ, ಇಬ್ಬರ ತಲೆ ಮೇಲೆ ಸೈಜ್ ಕಲ್ಲ ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕೋರಮಂಗಲ ಮೂಲದ ಅತ್ತಿಬೆಲೆ ನಿವಾಸಿ ದೀಪಕ್(45) ಮತ್ತು ಸ್ನೇಹಿತ ಮಾಯಸಂದ್ರದ ತರಕಾರಿ ವ್ಯಾಪಾರಿ ಭಾಸ್ಕರ್ (28) ಕೊಲೆಯಾದವರೆಂದು ಗುರುತಿಸಲಾಗಿದೆ.
ಅತ್ತಿಬೆಲೆ ಬಳಿ ಬಡ್ಡಿ ದಂಧೆಗೆ ಬಿತ್ತು ಜೋಡಿ ಹೆಣ ದೀಪಕ್ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಆಶೀರ್ವಾದ್ ಪೈಪ್ಸ್ ಕಂಪನಿಯಲ್ಲಿ ಕಾರ್ಮಿಕನಾಗಿದ್ದು, ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ. ಭಾಸ್ಕರ್ ಮಾಯಸಂದ್ರದವನಾಗಿದ್ದು ಇಸ್ಪೀಟ್ ಜೂಜಿಗೆ ಜೋತು ಬಿದ್ದು ಅತ್ತಿಬೆಲೆಯ ದೀಪಕ್ ನೊಂದಿಗೆ ಹಣ ಪಡೆದು ಜೊತೆಗಾರನಾಗಿದ್ದ.
ಕಳೆದ ಸೆಪ್ಟಂಬರ್ನಲ್ಲಿ ತಮಿಳುನಾಡಿನ ಸಿಪ್ಕಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಸನಟ್ಟಿಯಲ್ಲಿ ಜೂಜಾಟ ಆಡಿದ 16 ಮಂದಿಯಲ್ಲಿ 6ನೇ ಆರೋಪಿಯಾಗಿ ಸಿಕ್ಕಿ ಕೃಷ್ಣಗಿರಿ ಜೈಲುವಾಸಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಭಾಸ್ಕರ್, ದೀಪಕ್ ಸಹವಾಸದಲ್ಲಿದ್ದ.
ಅತ್ತಿಬೆಲೆಯ ದೀಪಕ್ ಹೊಸೂರು ಪಕ್ಕದ ಬೇಗೇನಹಳ್ಳಿಯ ದೊರೆ ಎಂಬಾತನಿಗೆ 15 ಸಾವಿರ ಹಣ ಬಡ್ಡಿಗೆ ನೀಡಿದ್ದ. ಬಡ್ಡಿ ವಾಪಸ್ ಬರದ ಕಾರಣಕ್ಕೆ, ಜೈಲಿಂದ ವಾಪಸ್ ಬಂದ ಭಾಸ್ಕರ್ನ ಜೊತೆಗೂಡಿ ತನ್ನ ಪಲ್ಸರ್ ಬೈಕಿನಲ್ಲಿ ಬೇಗೇನಹಳ್ಳಿಗೆ ಹೋಗಿ ದೊರೆಯ ಹೀರೋ ಬೈಕ್ ಕಸಿದುಕೊಂಡು, ಧಮ್ಕಿ ಹಾಕಿ ವಾಪಸ್ ಆಗಿದ್ದ. ವಾಪಸ್ ಬಂದು ಕೊಲೆಯಾದ ಜಾಗದಲ್ಲಿ ಈ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಇವರನ್ನ ಹಿಂಬಾಲಿಸಿದ್ದ ಬೇಗೇನಹಳ್ಳಿಯ ದೊರೆ, ಅರುಣ್ ಮತ್ತಿತರರು ಈ ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ : ಆನೇಕಲ್ನಲ್ಲಿ ಡಬಲ್ ಮರ್ಡರ್: ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿ ಕೃಷ್ಣ, ಡಿವೈಎಸ್ಪಿ ಮಲ್ಲೇಶ್, ಪಿಐಗಳಾದ ಕೆ.ವಿಶ್ವನಾಥ್, ರಾಘವೇಂದ್ರ ಮತ್ತು ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ವಿಧಿ ವಿಜ್ಞಾನ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಈಗಾಗಲೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅತ್ತಿಬೆಲೆ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.