ಬೆಂಗಳೂರು : ಚಾಮರಾಜನಗರ ದುರಂತಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, "ಆಕ್ಸಿಜನ್ ಇಲ್ಲದೇ 23 ಜನ ಸತ್ತಿದ್ದಾರೆ ಅನ್ನೋದು ತಕ್ಷಣ ವರದಿ ಆದ ಪ್ರಕರಣ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದೆ.
ಆಕ್ಸಿಜನ್ ಯಾರಿಗೆ ಕೊಡಬೇಕು-ಕೊಡಬಾರದು ಅನ್ನೋ ಬಗ್ಗೆ ವೈದ್ಯರಲ್ಲಿ ಗೊಂದಲ ಇದೆ. ನಮ್ಮ ಬಳಿ ಆಕ್ಸಿಜನ್ ಇಲ್ಲ ಎಂದು ಹೇಳಿದರೆ ಜನರೇ ಸಾಲ ಮಾಡಿ ಜೀವ ಉಳಿಸಿಕೊಳ್ತಾರೆ" ಎಂದಿದ್ದಾರೆ.
"ರಾಜ್ಯದಲ್ಲಿ 4-5 ಲಕ್ಷ ಸೋಂಕಿತರು ಇದ್ದಾರೆ. 1 ಲಕ್ಷದವರೆಗೂ ಐಸಿಯುಗೆ ಹೋದವರು ಇದ್ದಾರೆ. ಐಸಿಯುನಲ್ಲಿ ಇರೋರಿಗೆ ಆಕ್ಸಿಜನ್, ರೆಮ್ಡಿಸಿವಿರ್ ಕೊಡ್ತಿಲ್ಲ. ಬೆಡ್ ಕೊಟ್ಟಿದ್ದೇ ಸಾಧನೆ ಎಂದು ಹೇಳುತ್ತಿದ್ದಾರೆ. ಕೋವಿಡ್ ಬಂದ ಮೊದಲ ದಿನಗಳಲ್ಲಿ ರೆಮ್ಡಿಸಿವಿರ್ ಕೊಟ್ಟಿದ್ದರೆ ಬದುಕುತ್ತಿದ್ದರು.
ಆಕ್ಸಿಜನ್ ಲೆವೆಲ್ ಕಡಿಮೆ ಆದ ಬಳಿಕ ರೆಮ್ಡಿಸಿವಿರ್ ಕೊಡುತ್ತಿದ್ದಾರೆ. ಆಗ ಏನು ಪ್ರಯೋಜನವಿಲ್ಲ. ಇನ್ನು, ಆರ್‌ಆರ್‌ನಗರದ ಆಸ್ಪತ್ರೆಯಲ್ಲಿ ಪ್ರತಿದಿನ ಏಳು ಜನ ಸಾಯುತ್ತಿದ್ದಾರೆ" ಎಂದರು.
"ಬೆಂಗಳೂರಿನಲ್ಲಿ ಒಂದು ಲಕ್ಷ ಸೋಂಕಿತರಿಗೆ ಒಂದು ಸಾವಿರ ಇಂಜೆಕ್ಷನ್ ಕೊಡ್ತಿದ್ದಾರೆ. ಸಿದ್ದಗಂಗಾ ಆಸ್ಪತ್ರೆಗೆ ಎರಡು ಇಂಜೆಕ್ಷನ್ ಕೊಟ್ಟಿದ್ದಾರೆ. ಇದು ಯಾರಿಗೆ ಸಾಲುತ್ತದೆ. ಈ ಸಾವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ" ಎಂದು ಹೇಳಿದರು.