ಬೆಂಗಳೂರು: ಸಂಸದ ಡಿ ಕೆ ಸುರೇಶ್ ಅವರು ಇಂದು ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ಮೊನ್ನೆಯಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಠಾತ್ ಆಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಸಂಸದ ಸುರೇಶ್ ಅವರ ಭೇಟಿ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ನಮ್ಮ ಕಾರ್ಯಾಧ್ಯಕ್ಷರ ಜೊತೆಗೆ ಮಹತ್ತರವಾದ ಖಾತೆ ಹೊಂದಿದ್ದಾರೆ. ಮಳೆಯಿಂದ ರಸ್ತೆಗೆ ಗುಂಡಿಗಳು ಬಿದ್ದು, ದೊಡ್ಡ ಸಮಸ್ಯೆ ಆಗಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಅಂತ ಕೇಳುವುದಕ್ಕೆ ಬಂದಿದ್ದೆ. ಭೇಟಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ ಅನುಮೋದನೆ ಕೊಟ್ಟ ತಕ್ಷಣ ನನ್ನ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಹೇಳಿದ್ದರಲ್ಲಿ ತಪ್ಪಿಲ್ಲ:ಬಳಿಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ ಕೆ ಸುರೇಶ್, ನಾನೂ ಸಿಎಂ ಆಕಾಂಕ್ಷಿ ಎಂದು ಸತೀಶ್ ಹೇಳಿದ್ದರಲ್ಲಿ ತಪ್ಪಿಲ್ಲ. ಯಾರು ಸಿಎಂ ಆದ್ರೂ ಕೂಡ ನಾನು ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು ಅಂತ ನಾನು ಬಯಸುತ್ತೇನೆ. ಸದ್ಯ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಸಿಎಂ ಆಕಾಂಕ್ಷಿ ಅಂತ ಸತೀಶ್ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರು.
ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಯಾರೂ ಆಗಬಾರದು ಎನ್ನುವಹಾಗಿಲ್ಲ. ಶಾಸಕರಾದವರಿಗೆ ಮಂತ್ರಿ ಆಗಬೇಕು ಅಂತ ಆಸೆ. ಮಂತ್ರಿ ಆದವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ. ಏನೂ ಇಲ್ಲದವರಿಗೆ ಶಾಸಕರಾಗಬೇಕು ಅಂತ ಆಸೆ. ಇದೊಂದು ಸೈಕಲ್, ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.