ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್ ಮನೆ ಹಾಗೂ ಕಚೇರಿ ಸೇರಿದಂತೆ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿ ಮುಕ್ತಾಯಗೊಳಿಸಿದೆ. ಸದಾಶಿವನಗರದಲ್ಲಿರುವ ಡಿಕೆ ಸಹೋದರರ ಮನೆಯಿಂದ ಸಂಜೆ ಸಿಬಿಐ ಅಧಿಕಾರಿಗಳು ನಿರ್ಗಮಿಸುತ್ತಿದ್ದಂತೆ ಡಿಕೆಶಿ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಬಿಜೆಪಿ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ. 2017ರಲ್ಲಿ ಐಟಿ ನನ್ನ ಮನೆ ದಾಳಿ ನಡೆಸಿತ್ತು. ಇದಾದ ಒಂದು ವರ್ಷದ ಬಳಿಕ ಆರ್ಥಿಕ ನ್ಯಾಯಾಲಯದಲ್ಲಿ ನನ್ನ ಮೇಲೆ ಬೇನಾಮಿ ಆಸ್ತಿಗಳಿಕೆ ಪ್ರಕರಣ ದಾಖಲಾಯಿತು. ಬಳಿಕ 2019ರಲ್ಲಿ ಇಡಿ ಅಧಿಕಾರಿಗಳು ನನ್ನನ್ನು ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಇದರ ಪರಿಣಾಮ ಕೆಲದಿನತಿಹಾರ್ ಜೈಲಿನಲ್ಲಿ ಇರಬೇಕಾಯಿತು.
ಸಿಬಿಐ ದಾಳಿ ಬಳಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಹೀಗಾಗಿ ಕಾಂಗ್ರೆಸ್ ನಾಯಕರು ಸೇರಿದಂತೆ ರಾಜ್ಯದ ಜನರು ಶಿವಕುಮಾರ್ಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಂದಿನ ಪೊಲೀಸ್ ಕಮಿಷನರ್ ಪ್ರತಿಭಟನಾಕಾರರಿಗೆ ಬೆದರಿಕೆವೊಡ್ಡಿದ್ದರು. ಸಿಬಿಐ ದಾಳಿ ಬಳಿಕ ನಮ್ಮ ಜನರು ತೋರಿಸಿದ ಪ್ರೀತಿ ಮರೆಯುವುದಕ್ಕೆ ಸಾಧ್ಯವಿಲ್ಲ. ಜೈಲಿಂದ ಹೊರಬಂದಾಗ ಕಾಂಗ್ರೆಸ್ ವರಿಷ್ಠರು ನನ್ನ ಪರ ನಿಂತರು. ಬಳಿಕ ಬೆಂಗಳೂರಿಗೆ ಬಂದಾಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಬಲ ಕೊಟ್ಟರು.
ಜೈಲಿನಿಂದ ಬಂದವನಿಗೆ ಇದೆಲ್ಲಾ ಬೇಕಾ ಎಂದು ಬಿಜೆಪಿಯವರು ಪ್ರಶ್ನಿಸಿದರು. ಜೈಲಿಂದ ಮೊದಲು ಬಂದವರು ಯಾರು ಎಂಬುದನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿಎಸ್ವೈ ವಿರುದ್ಧ ವ್ಯಂಗ್ಯವಾಡಿದರು.
ಚುನಾವಣೆ ಮುಗಿಯುವತನಕ ಇಂತಹ ದಾಳಿ ನಡೆಯುತ್ತಾ ಇರುತ್ತದೆ. ಈ ಹಿಂದೆ ಐಟಿ ಹಾಗೂ ಇಡಿ ದಾಳಿ ಮಾಡಿತ್ತು. ನಾನು ತಿಹಾರ್ ಜೈಲಿನಲ್ಲಿದ್ದಾಗ ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ನಾನು ತಪ್ಪು ಮಾಡಿದ್ರೆ ತಾನೇ ಹೆದರುವ ಪ್ರಶ್ನೆ, ನಾನು ಯಾವುದೇ ತಪ್ಪು ಮಾಡಿಲ್ಲ. ಹೆದರುವುದೂ ಇಲ್ಲ. ರಾಜಕೀಯವಾಗಿ ನನಗೆ ತೊಂದರೆ ಕೊಡುತ್ತಿದ್ದೀರಾ.. ನಾನು ಇದನ್ನು ಎದುರಿಸಲು ರೆಡಿಯಾಗಿದ್ದೇನೆ ಎಂದರು.
ರಾಜಕೀಯ ಕುತಂತ್ರಕ್ಕೆ ಹೆದರುವ ಮಗ ಅಲ್ಲ :ಇಲ್ಲಿ ಎಲ್ಲರೂ ಹರಿಶ್ಚಂದ್ರರ ಮೊಮ್ಮಕ್ಕಳೇ, ಅವರೇ ಚೆನ್ನಾಗಿರಲಿ.. ನನ್ನ ಬಾಯಿ ಮುಚ್ಚಿಸಲು ಯಾರ್ಯಾರು ಪ್ರಯತ್ನ ಮಾಡ್ತಾ ಇದ್ದಾರೋ ಅವರೆಲ್ಲರೂ ಚೆನ್ನಾಗಿರಲಿ.. ರಾಜಕೀಯ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಎಂದಿಗೂ ನಾನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟು ಅಧ್ಯಕ್ಷರನ್ನಾಗಿ ಮಾಡಿದರು. ಇದರಂತೆ ಜನಪರ ಕೆಲಸ ಮಾಡುತ್ತಿದ್ದೆ. ಕೊರೊನಾ ವಿಚಾರವಾಗಿ ರಾಜ್ಯ ಸರ್ಕಾರ ನಡೆಸಿದ ಭ್ರಷ್ಟಾಚಾರ ಬಗ್ಗೆಯೂ ದ್ವನಿ ಎತ್ತಿದ್ದೆ. ಈ ನಿಟ್ಟಿನಲ್ಲಿ ಹೋರಾಟ ಮಾಡಿದ್ದೆವು. ಹೋರಾಟ ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡಿತು ಎಂದು ಟೀಕಿಸಿದರು.
ಚುನಾವಣೆ ಘೋಷಣೆ ಬಳಿಕ ಸಿಬಿಐ ನನ್ನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ದಾಳಿಗೆ ಅನುಮತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಯಾಕಿಷ್ಟು ಆತುರ.. ಯಾಕಿಷ್ಟು ಆತುರವಾಗಿ ಅನುಮತಿ ಕೊಟ್ಟರು ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನಾನೇನು ಓಡಿ ಹೋಗುತ್ತಿದ್ದೇನಾ. ಕಳೆದ 30 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲಾದರೂ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆಯಾ ? ನಾನೇನಾದ್ರೂ ತಪ್ಪು ಮಾಡಿದ್ರೆ ನೀವು ಕೊಡುವ ಶಿಕ್ಷೆ ಅನುಭವಿಸುತ್ತೇನೆ ಎಂದು ಸವಾಲು ಹಾಕಿದರು.
ಇಡಿ, ಐಟಿ ಹಾಗೂ ಸಿಬಿಐ ನನ್ನ ಹಾಗೂ ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿವೆ. ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ ? ಡಿಕೆಶಿ ಒಬ್ಬನೇನಾ ಸಿಕ್ಕಿರೋದು. ದಾಳಿ ಮಾಡಿಸಿ ನನ್ನನ್ನು ಬಾಯಿ ಮುಚ್ಚಿಸುವುದು ಭ್ರಮೆ ಎಂದರು. ದಾಳಿ ವೇಳೆ ನನ್ನ ಮನೆಯಲ್ಲಿ ಸಿಕ್ಕಿದ್ದು 1.77 ಲಕ್ಷ ರೂ. ನಗದು ಮಾತ್ರ. ನನ್ನ ಮನೆಯಲ್ಲಿರುವ ಪಂಚೆ, ಶರ್ಟ್, ಪ್ಯಾಂಟು, ಸೀರೆ ಮೇಜು ಸೇರಿದಂತೆ ಎಲ್ಲವನ್ನು ಸಿಬಿಐ ಅಧಿಕಾರಿಗಳು ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಿಕ್ಕಿದೆ ಎಂಬುದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದರು.