ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಂಭ್ರಮದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಂಪೂರ್ಣವಾಗಿ ಇಡಿ ತೂಗುಗತ್ತಿಯನ್ನೂ ಮರೆಯುವಂತಿಲ್ಲ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.
ಒಂದೆಡೆ ಹೈಕಮಾಂಡ್ನಿಂದ ಒಂದೆರಡು ದಿನದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಆದೇಶದ ನಿರೀಕ್ಷೆಯಲ್ಲಿರುವ ಶಿವಕುಮಾರ್ಗೆ ಇನ್ನೊಂದೆಡೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆಯಬಹುದಾದ ಆತಂಕ ಕೂಡ ಇದೆ. ನಿನ್ನೆ ಸಂಜೆ ಅಧಿಕಾರ ಸಿಗುವ ಸಂಭ್ರಮದಲ್ಲಿ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಡಿಕೆಶಿ, ಬಳಿಕ ರಾತ್ರಿ ತಮ್ಮ ವಕೀಲರನ್ನು ಭೇಟಿ ಮಾಡಿ ನ್ಯಾಯಾಲಯದ ವಿಚಾರಣೆ ಸಂಬಂಧ ವಿವರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಎರಡೂ ಕಾರ್ಯವನ್ನೂ ಒಟ್ಟೊಟ್ಟಿಗೆ ಮಾಡಿಕೊಳ್ಳುತ್ತಿರುವ ಡಿಕೆಶಿ ಸದ್ಯ ಅಧಿಕಾರ ಸಿಕ್ಕರೂ, ಜಾರಿ ನಿರ್ದೇಶನಾಲಯದ ವಿಚಾರವನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆಸಬಹುದು. ಅನಾರೋಗ್ಯದ ಕಾರಣ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಇವರನ್ನು ಕರೆದು ಪ್ರಶ್ನಿಸಬಹುದು. ಇನ್ನಷ್ಟು ವಿಚಾರಣೆಗಾಗಿ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಇಡಿ ಮನವಿ ಮಾಡಬಹುದು. ಈ ಎಲ್ಲಾ ಆತಂಕದ ನಡುವೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರುತ್ತಿದ್ದಾರೆ.
ಕೇಂದ್ರ ಸರ್ಕಾರ ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಪ್ರತಿಪಕ್ಷಗಳ ಆರೋಪ ಸತ್ಯವಾಗತ್ತಾ ಅಥವಾ ಅಧಿಕಾರ ಮೊದಲು ಸಿಗುತ್ತಾ ಎನ್ನುವ ಆತಂಕದಲ್ಲಿದ್ದಾರೆ. ಆದಾಗ್ಯೂ ದೇವಸ್ಥಾನ, ಮಠಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆಯುವ ಜೊತೆಗೆ ವಕೀಲರನ್ನು ಭೇಟಿ ಮಾಡಿ ಎದುರಾಗುವ ಆತಂಕಕ್ಕೆ ಪರಿಹಾರ ಕೂಡ ಹುಡುಕಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ನಿರಂತರ ಆತಂಕದ ನಡುವೆಯೇ ತಮಗೆ ಸಿಗಲಿದೆ ಎಂದು ಭರವಸೆ ಲಭಿಸಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿಕೆಶಿ ಕಾದಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಇಡಿ ತೂಗುಗತ್ತಿಗೆ ಸಿಲುಕಲಿದ್ದಾರೆ ಎನ್ನುವ ಅರಿವಿದ್ದರೂ ಪ್ರಬಲ ಒಕ್ಕಲಿಗ ನಾಯಕ ಎನ್ನುವ ಕಾರಣಕ್ಕೆ ಹೈಕಮಾಂಡ್ ಕೂಡ ಇವರಿಗೆ ಪಟ್ಟ ಕಟ್ಟಲು ಮುಂದಾಗಿದೆ.