ಬೆಂಗಳೂರು:ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಭಾವ ಬೀರುವುದು ಸರಿಯಲ್ಲ. ಯಾರೂ ಕೂಡ ತನಿಖೆ ಮಧ್ಯೆ ಪ್ರಭಾವ ಬೀರಿಲ್ಲವೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ವಿಕಾಸಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆ ಪ್ರಗತಿಯಲ್ಲಿರುವಾಗ ಯಾರೂ ಕೂಡ ಸಹನೆ ಕಳೆದುಕೊಳ್ಳುವುದು ಬೇಡ. ಸರ್ಕಾರ ಯಾವುದೇ ಇರಲಿ, ಏನಾದರೂ ಇರಲಿ, ನಿಷ್ಠುರವಾಗಿ, ನಿಷ್ಪಕ್ಷಪಾತವಾಗಿ ನಮ್ಮ ಪೊಲೀಸರು ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಹಾಗೆಯೇ ಅಮಾಯಕರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಎಸ್ಡಿಪಿಐ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಚರ್ಚೆ ಮಾಡುತ್ತಾರೆ. ಮಾಹಿತಿ ಸಂಗ್ರಹಿಸಿದ ಬಳಿಕ ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸುತ್ತೇವೆ. ಈ ಸಂದರ್ಭದಲ್ಲಿ ಬೇರೆ ಬೇರೆ ವ್ಯಾಖ್ಯಾನಗಳು ಬೇಡ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿ, ಈಗಾಗಲೇ ಅವರ ಹೇಳಿಕೆಗೆ ಉತ್ತರ ಕೊಟ್ಟಿದ್ದೇನೆ. ಅದನ್ನು ಪುನರುಚ್ಚಾರ ಮಾಡುವುದಕ್ಕೆ ಹೋಗುವುದಿಲ್ಲ. ಆಗಸ್ಟ್ 27ರಂದು ಜಿಎಸ್ಟಿ ಸಭೆ ಇರುವ ಹಿನ್ನೆಲೆ, ಇಂದು ಪೂರ್ವಭಾವಿ ಸಭೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಶುಭ ಕೋರಿದ ಗೃಹ ಸಚಿವರು, ರಾಜ್ಯದಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಹಾರೈಸಿದ್ದಾರೆ.