ಬೆಂಗಳೂರು: ದೀಪಾವಳಿ ಹಬ್ಬದಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಮೂರು ದಿನಗಳ ಕಾಲ ಸಾಲು ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸುವುದು ಈ ಹಬ್ಬದ ಸಂಪ್ರದಾಯ. ಅಂಧಕಾರವ ಕಳೆದು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಗಳ ಹಬ್ಬವನ್ನು ಸ್ವಾಗತಿಸಲು ನಗರದ ಮಾರುಕಟ್ಟೆಯಲ್ಲಿ ಬಗೆಬಗೆಯ ಹಣತೆಗಳು ಬಂದಿವೆ. ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಪರಿಸರ ಸ್ನೇಹಿ ದೀಪಗಳಾಗಿರುವುದರಿಂದ ಬೇಡಿಕೆ ಹೆಚ್ಚಿದೆ. ನಗರದಲ್ಲಿ ಜೇಡಿ ಮಣ್ಣಿನಿಂದ ಹೂವು, ಆನೆಯ ಮಾದರಿಯ ದೀಪ, ನವಿಲುಗರಿ ಮತ್ತು ಮಹಿಳಾ ಪ್ರತಿರೂಪದ ದೀಪ ಸೇರಿದಂತೆ ಬಣ್ಣ ಬಣ್ಣದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ದೀಪಾವಳಿ ಹಿನ್ನೆಲೆ ಮಲ್ಲೇಶ್ವರ, ರಾಜಾಜಿನಗರ, ಜೆಪಿ ನಗರ, ವಸಂತನಗರ, ಶಿವಾಜಿನಗರ, ಶೇಷಾದ್ರಿಪುರ ಸೇರಿದಂತೆ ವಿವಿಧೆಡೆ ದೀಪಗಳ ಖರೀದಿ ಭರದಿಂದ ಸಾಗಿದೆ. ಮಣ್ಣಿನ ಹಣತೆ, ಮಡಿಕೆ, ಹೂಕುಂಡ ಮನೆಯ ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ. ಬಣ್ಣ, ಆಕೃತಿ, ಗಾತ್ರಕ್ಕನುಗುಣವಾಗಿ ಒಂದು ಹಣತೆಗೆ 10 ರೂ. ಗಳಿಂದ 250 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.
ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚುವ ಹಾಗೇ ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಇದೆ. ತುಳಸಿ ಮದುವೆವರೆಗೆ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತೇವೆ ಎಂದು ಗ್ರಾಹಕರಾದ ದೀಪ ಎಂಬುವರು ತಿಳಿಸಿದ್ದಾರೆ.